top of page

ಒಯ್ಯಾರದ ಭೂಮಿ

ಹಾಡೆ ಹಗಲಲಿ ಜೋಡಿ ತಿಂಗಳು ನಿನ್ನ ಬೊಗಸೆ ಕಂಗಳು ಸುಡುವ ಬಿಸಿಲ ಕುಡಿದು ಅಮಲಲಿ ಹಬ್ಬುವ ಬೆಳದಿಂಗಳು ಹಂಗಾಮಕೆ ಹಸಿದು ಕೆರಳಿ ಬಿರಿತು ನಿಂತ ಭೂಮಿಯೆ ಸಂಗ್ರಾಮಕೆ ಮೈಯನೊಡ್ಡುವ ಒಯ್ಯಾರದ ಸೀಮೆಯೆ ಮುಂಗಾರಿನ ಗುಡುಗು ಮಿಂಚಿನ ಅಬ್ಬರಗಳ ಎದುರಿಸಿ ಸರದಿಯಲ್ಲಿ ಸುರಿದ ಮಳೆಗೆ ಮಣ್ಣೊಳಗನೆ ಕದಲಿಸಿ ಮಣ್ಣಿನೆದೆಗೆ ಇಳಿದು ಹೂವಾಗಿ ನಗುವು ಅರಳಿಸಿ ಮುಗಿಲೆತ್ತರಕೂ ಬೆಳೆದು ನಿಂತು ಚೆಲುವು ಬಾಗಿಸಿ ಮೈಮನಗಳ ಹೊಕ್ಕು ಹೊಮ್ಮುವ ಹೂಬಾಣಗಳಾಟವೊ ಹೆದೆಯೇರಿದ ಬಿಲ್ಲಿನಂಥಾ ಬಿಗಿದ ಮೈಯ ಮಾಟವೊ ಬಣ್ಣಗಳಲಿ ತೊಯ್ದು ನೆನೆದು ಕನಸುಗಳ ತೂಗೆ ನೆಲಮುಗಿಲನು ತಬ್ಬಿಕೊಂಡು ರಂಗೇರುವ ಹಾಗೆ ಕೆಂಪು ತುಟಿಗಳ ಕೆಂಡದೊಳಗೆ ಖುಷಿಯ ಸುರುಸುರು ಬತ್ತಿಯೊ ಸಿಡಿ ಮದ್ದಿನ ಗಂಟೊ ಎದೆಯು ಜೋಡಲಗಿನ ಕತ್ತಿಯೊ ತೊನೆದಾಡುವ ಸೊಂಟ ಕುಣಿಸಿ ಉಲ್ಕೆಗಳನು ಉದುರಿಸಿ ನೆಲತಾಗದ ಹೆಜ್ಜೆಗಳಲಿ ಹಾಲು ಹಾದಿ ತೆರೆಯಿಸಿ ನನ್ನ ತೂರಿದೆ ನನ್ನ ತೋರಿದೆ ಹುಚ್ಚು ಹಿಡಿಸಿದ ರಂಭೆಯೆ ಕಣ್ಣ ಕಟ್ಟಲಿ ಕಣ್ಣ ಕಟ್ಟಿದೆ ಮಾಟಗಿತ್ತಿ ಬೊಂಬೆಯೆ - ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ. ಕವಿಯಾಗಿ,ವಿಮರ್ಶಕರಾಗಿ,ವಾಗ್ಮಿಯಾಗಿ ಸಾಹಿತ್ಯ ಪ್ರಪಂಚದಲ್ಲಿ ಪ್ರಜ್ಞಾವಂತರ ಗಮನಸೆಳೆದಿರುವ   ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಅವರದು ಸದಾ ಪಾದರಸದಂತೆ ಹರಿದಾಡುವ ಕ್ರಿಯಾಶೀಲ ವ್ಯಕ್ತಿತ್ವ.ಅದಕ್ಕೆ ಅವರ ನವೀನ ಆಲೋಚನೆಗಳ ಸೃಜನಶೀಲ ತುಡಿತವೇ ಕಾರಣ.ಈ ಎರಡು ಶಕ್ತಿಗಳು ಅವರ ಕ್ರಿಯೆ ಹಾಗೂ ಅಭಿವ್ಯಕ್ತಿಗಳಿಗೆ ವಿಶೇಷ ತೇಜಸ್ಸನ್ನು ಒದಗಿಸಿವೆ.ಅವರ ವ್ಯಕ್ತಿತ್ವದ ಕೇಂದ್ರ ನೆಲೆ ಕವಿತ್ವವೇ ಆಗಿರುವುದರಿಂದ ಅವರೆಲ್ಲ ಚಟುವಟಿಕೆಗಳಲ್ಲಿ ಮಾನವೀಯ ಭಾವನೆಗಳ ಸ್ಪಂದನೆ ಇದೆ.ಜಾನಪದ-ಶಿಷ್ಟ,ಪ್ರಾಚೀನ-ಆಧುನಿಕ,ಸೃಜನ-ಸೃಜನೆತರ ಇವೇ ಮೊದಲಾದ ನೆಲೆಗಳಲ್ಲಿ ಸಮಾನ ಶ್ರದ್ಧೆಯಿಂದ ತಮ್ಮನ್ನು ತೊಡಗಿಸಿಕೊಂಡ ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಅವರು ಒಂದೊಂದರಲ್ಲೂ ಮಹತ್ವದ ಕೃತಿಗಳನ್ನು ನೀಡಿರುವುದು ಅಪರೂಪದ ಸಾಧನೆ. ಅವರು ಈವರೆಗೂ ಹದಿನೈದಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಅಪಾರ ಶಿಷ್ಯ ಬಳಗದ ಪ್ರೀತಿ- ಗೌರವಾದರಗಳಿಗೆ ಪಾತ್ರರಾಗಿರುವ ಪ್ರೊ.ಮಟ್ಟಿಹಾಳ ಅವರು ದಕ್ಷ ಆಡಳಿತಗಾರರಾಗಿಯೂ ಮೌಲ್ಯಮಾಪನ ಕುಲಸಚಿವ ಸ್ಥಾನದ ಘನತೆಯನ್ನು  ಹೆಚ್ಚಿಸಿದ್ದಾರೆ.ಸ್ನೇಹ ಅವರ ವ್ಯಕ್ತಿತ್ವದ ಪ್ರಧಾನ ಗುಣವಾಗಿದ್ದು ಹತ್ತಿರಕ್ಕೆ ಬಂದವರನ್ನೆಲ್ಲ ಅಕ್ಕರತೆಯಿಂದ ಸೆಳೆಯುವ ಚುಂಬಕಶಕ್ತಿ ಅವರಿಗಿದೆ.ಇವರ ಬರಹದ ಸ್ಥಾಯಿಪ್ರಜ್ಞೆ ಸಮಾಜ.ಮೀಮಾಂಸೆಯ ಪರಿಭಾಷೆಯ ಹಂಗಿಲ್ಲದೇ ಅಕ್ಷರದ ಅರಿವಿಗೆ ಮಾನವೀಯತೆಯ ಸ್ಪರ್ಶವನ್ನು ನೀಡುವ,ಕಟ್ಟಕಡೆಯ ಮನುಷ್ಯನನ್ನು ಮುಟ್ಟಿ ಎಚ್ಚರಿಸುವ ಮಟ್ಟಿಹಾಳ ಅವರ ಬರವಣಿಗೆಯ ಸಾಮರ್ಥ್ಯ ಮೆಚ್ಚುವಂತದ್ದು- ಸಂಪಾದಕರು

ಒಯ್ಯಾರದ ಭೂಮಿ
bottom of page