ಒಂದೇ ಸಲ
ನಿಜವಾದ ಪ್ರೀತಿ
ಒಮ್ಮೆಲೇ ಆಗುವುದು
ಅನ್ನೋದೆಲ್ಲ ಕಟುಸುಳ್ಳು
ನಿನ್ನ ಮೇಲೆ ನನಗೆ ಪದೆ ಪದೇ ಪ್ರೀತಿಯಾಗುತ್ತದೆ
ನಿನ್ನನ್ನು ಪ್ರೀತಿಸಲು ಕಲಿತ ನಾನು
ನಿನ್ನ ಅಗಲಿಕೆಗೆ ನಾಲ್ಕು ದಿನ ಮುದುಡಿ
ನಂತರ ಮತ್ತದೇ ಒಲವಿಗೆ
ಪೊರೆ ಬಿಟ್ಟ ಹಾವಿನಂತೆ ಹೊಸಬನಾಗುತ್ತೇನೆ
ಪ್ರೀತಿಸುತ್ತೇನೆ
ಪ್ರೀತಿಸುತ್ತಲೇ ಇರುತ್ತೇನೆ
ಒಂದೇ ಸಲ ಪ್ರೀತಿ ಅನ್ನುವುದು ಹಾಸ್ಯಾಸ್ಪದ
ನಾನು ಆಗ ಒಬ್ಬಳನ್ನು ಪ್ರೀತಿಸಿದ್ದೆ
ಅವಳನ್ನು ಕುರಿತು ದಿನಕ್ಕೊಂದು ಪದ್ಯ ಬರೆದೆ
ಒಬ್ಬನೇ ಅವನ್ನು ಪದೆ ಪದೇ ಓದಿದೆ
ಓದುವ ಬರೆಯುವ ಬರದಲ್ಲಿ ಮಿಲನದ ಚಲನೆಯನ್ನೇ ಮರೆತಿದ್ದೆ
ಅವಳಿಗೆ ಮುತ್ತು ಕೊಡುವ ಅಥವಾ
ಕಣ್ಣೀರೊರೆಸುವ ತಾಪತ್ರಯಗಳಿಗೆ ಬೇಗ ಒಗ್ಗಲಿಲ್ಲ
ಅಪ್ಪಿಕೊಳ್ಳಲಿಲ್ಲ
ಜಾತಿ ಧರ್ಮದ ಹೆಸರಿನಲ್ಲಿ
ಅವಳನ್ನು ದೂರವಿಟ್ಟೆ
ಅವಳನ್ನು ಕೂಡುವ ಯೋಗ್ಯತೆ ಇಲ್ಲದ ಹೇಡಿಯೇ ಆಗಿದ್ದರೂ ಬಿಡುವಾಗ ಅವಡುಗಚ್ಚಿ ಅತ್ತಿದ್ದೆ
ಅವಳು ಅತ್ತಂತೆ ಕಾಣಲಿಲ್ಲ
ಅವಳು ಇನ್ನೊಬ್ಬನ ಕೈ ಕೈ ಹಿಡಿದು ನಡೆದಳಂತೆ
ಅವನು ಅವಳಿಗೆ ಮುತ್ತು ಕೊಟ್ಟನಂತೆ
ಇಲ್ಲಿ ನಾನು ನನ್ನ ತುಟಿಗಳನ್ನು ಕನ್ನಡಿಯಲ್ಲಿ
ಹೊಸದಾಗಿ ನೋಡಿಕೊಂಡೆ
ನನಗು ಎಲ್ಲರೂ ಸೇರಿ
ಮದುವೆ ಮಾಡಿದರು
ಮಕ್ಕಳಾದವು
ಈಗ ಸರಿ ರಾತ್ರಿಯಲ್ಲಿ ಅವಳಿಲ್ಲದ ಹಾಸಿಗೆಗೆ ಬೆಂಕಿ ಹಚ್ಚುತ್ತೇನೆ
ಅವಳು ಮಾಡುವ ಶುಶ್ರೂಷೆಗಾಗಿ ಜ್ವರ ಹೆಚ್ಚಾದಂತೆ ನರಳುತ್ತೇನೆ
ಅವಳೊಂದಿಗೆ ಮುನಿದ ದಿನವೇ
ಅಪ್ಪುಗೆಗಾಗಿ ಹಾತೊರೆಯುತ್ತೇನೆ
ಇದು ಪ್ರೀತಿ ತಾನೆ
ಆ ಒಂದೇ ಸಲ ಪ್ರೀತಿ ಅನ್ನುವುದಾದರೆ ಇದೇನು?
ಪ್ರೀತಿಸಲಾಗದ ಹೇಡಿಗಳಷ್ಟೇ
ಇನ್ನೊಬ್ಬರ ಪ್ರೀತಿಗೆ ವ್ಯಾಖ್ಯಾನ ಕೊಡಬಲ್ಲರು
ಅವಳನ್ನು ಜೀವದಂತೆ ಪ್ರೀತಿಸುವ ನಾನು
ಅವಳನ್ನು ಪ್ರೀತಿಸದೇ ಹೋದರೆ
ಅಥವಾ ನೆಗೆದು ಬಿದ್ದರೆ
ಅವಳ ಕಣ್ಣೀರು ಒರೆಸುವ
ಆ ಕೈಗಳ ಮೇಲೆ ಅವಳಿಗೆ ಪ್ರೀತಿಯಾಗಲೇಬೇಕು
ತೃಣಮಾತ್ರ ಹಸಿ ಇರುವಷ್ಟು ದಿನ
ಗರಿಕೆ ಚಿಗುರುವಂತೆ
ಹೊಳೆ ಇದ್ದಷ್ಟೂ ಕಾಲ
ಮೀನುಗಳು ಹುಟ್ಟುವಂತೆ
ಪ್ರತಿ ರಾತ್ರಿಯೂ
ಪ್ರತಿ ಹಗಲೂ
ಈಗ ಇದನ್ನು ಓದಿದ ಮೇಲೆಯೂ
ನಿಮ್ಮ ಪ್ರೀತಿ ಪಾತ್ರರು ಕಣ್ಣ ಮುಂದೆ ಬಂದೇ ಬರುತ್ತಾರೆ
ಒಬ್ಬರೂ ಬರದ ದಿನ ಪ್ರೀತಿ ಸತ್ತಿರುತ್ತದೆ
- ಚಂದ್ರು ಎಂ ಹುಣಸೂರು