top of page

ಏಲಾಗೀತ ಕವನ

ಏಲಾವನ ಲವಲೀಬನ ಲವಂಗ ಬನಗಳಲೀ ನಾಗಲತಾ ಸಂಕುಲ ಬನವಾಸಿಯ ಜನಗಳಲೀ ಲೀಲಾಂದೋಲಿತ ದೋಲಾ ಲಲನಾಮಣಿಗಳಲಿ/ಏಲಾ ಏಲಾಪದ ಲೀಲಾಪದ ಆಲಾಪದ ಸರಣೀ ಸಖಸಖಿಯರ ಮೇಳಾಪದೆ ತೆರೆದಿರೆ ಎದೆ ಭರಣಿ ಆಲಿಸುತಿವೆ ಮಾಲಿಸುತಿವೆ ಹರಿಣದ ಜತೆ ಹರಿಣಿ/ ಙಂ ಞಣನಮಾ, ಅಂ ಜ್ಞ ಓಂ ಜಂ ಸಂ ಶಂ ಎಂಬಾ ಅಂಬಾಗರೆವುದು ವಾಣಿಯ ವೀಣೆಯು ಬಾಯ್ತುಂಬಾ ಬಾ ಅಮ್ಮಾ ಅಮಾ ಬಾ ಬಾರೇ ಜಗದಂಬಾ/ ಉಸಿರುಸಿರಲಿ ಸರಿವರಿದೂ ಊದೂದುತ ನಲಿದು ದನಿಯೆ ನದಿಯೊಲಿ ಚಲಿಸಿತು ಕೊಂಕೊಂಕೆನೆ ಒಲೆದು ಅಲೆಯಾಯಿತು ಬಲೆಯಾಯಿತು ಜಗದಗಲಕೆ ಸೆಲೆದು/ ಕಿನ್ನರಿ ಕಿನ್ನರಿ ಮಿಥುನವು ಅರೆಅರೆ ಮೈಗೂಡಿ ನುಡಿಯಲಿ ಹುದುಗಿದ ಹುರುಳೊಳು ಹದುಳದೊಳೊಡಮೂಡಿ ನಾಲಿಗೆ ನಾಡಿಯನಾಡಿಸಿ ಸ್ವರಮೂರ್ತಿಯ ಮಾಡಿ/ ನರಗಳಲಿಂಗಿಂಗೀ ನರನಾಳದೆ ತಂಗೀ ಲಾಸ್ಯದಿ ಹಾಸ್ಯವ ಮಿಂಚಿಸಿಪರಶಿವನರ್ಧಾಂಗಿ ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗೀ/ ನೆಲೆಗೆಡಿಸುವ ವಾಸನೆಗಳ ಎದೆಬೀಜವ ಸೀಳಿ ರತಿರಮಣನ ನಿಜಜನಕನ ಎದೆಯಾಳವನಾಳಿ ಹೃದಯಾಕೂತಿಯ ಅನುಪಮ ಲಾವಣ್ಯವ ತಾಳಿ/ ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು/ ಯಾಳದ ಜತಿ ಏಳೆಯ ಗತಿ ಏಳೇಳೇಳೆಂದು ಎಬ್ಬಿಸಿ ಮಬ್ಬನು ಚದುರಿಸಿ ಬಾಳ್ ಬಾಳ್ ಬಾಳೆಂದು ತಂತಿಯ ತಾಳಕೆ ಮಿಡಿದರೆ , ಎಲ್ಲಾಯಿತು ಒಂದು/ ಏಳೆಯ ಬಸಿರೊಳು ಮಲಗಿದ ಯಾವುದೊ ಗತಿ ಚಿತ್ರ ದನಿ ಪಡೆದಿತು, ತಿಳಿದೆದ್ದಿತು ಕಣ್ಬಡೆದು ವಿಚಿತ್ರ ಆ ಕ್ಷಣವನು ಈ ಕ್ಷಣವನು ಮಾಡಿತು ಸುಪವಿತ್ರ/ ಏಲಾವನ...‌‌‌‌‌ - ಅಂಬಿಕಾತನಯದತ್ತ ಇದೊಂದು ಅಪರೂಪದ, ವೈಶಿಷ್ಟ್ಯಪೂರ್ಣವಾದ ಕವನ. ಮೊದಲ ಓದಿಗೆ ಅರಗಿಸಿಕೊಳ್ಳಲಾಗದ ರಚನೆ. ಬೇಂದ್ರೆ ಓರ್ವ ದೃಷ್ಟಾರ ಕವಿ. ಅವಧೂತ ಕವಿ. ಅವರಿಗೆ ಕಾವ್ಯ ಕೇವಲ ಶಬ್ದ-ಯೋಗವಲ್ಲ. ನಾದ-ಯೋಗ. ಅವು ಶಬ್ದಚಿತ್ರಗಳಾಗಿ ನಮ್ಮ ಕಣ್ಣಮುಂದೆ ನಿಲ್ಲುತ್ತವೆ. ಅದರಿಂದ ಹೊರಬರುವ ನಾದದಲ್ಲಿ ನಮ್ಮ ಮನ ಲೀನವಾಗಿಬಿಡುತ್ತದೆ. ಈ ಏಲಾಗೀತದ ಒಳತಿರುಳಿನ ಬಗ್ಗೆ ಬೇಂದ್ರೆಕಾವ್ಯದ ಒಳಹೊಕ್ಕವರೊಬ್ಬರ ವಿವರಣೆ ಯನ್ನು ಗಮನಿಸೋಣ. " ಏಲಾ" ಇದು ಒಂದು ಅಪರೂಪವಾಗಿ ಸಿಗುವ ಆಯುರ್ವೇದೀಯ ಸಸ್ಯ. ಸಂಸ್ಕೃತದಲ್ಲಿ " ರಸ್ನಾ" ಎಂದು, ಇಂಗ್ಲಿಷಿನಲ್ಲಿ mimosa octandra. ವಲ್ಲಗ, ಬದರಾ ಎಂದೂ ಹೇಳುತ್ತಾರೆ. ಲವಲೀವನ ಎಂದರೆ ಅರೆನೆಲ್ಲಿಯ ವನ. ಲವಂಗ ಅಂದರೆ ಗೊತ್ತು. ನಾಗಲತೆ ಅಂದರೆ ಒಂದು ಜಾತಿಯ ವೀಳ್ಯದೆಲೆ. ಏಲಾಗೀತವೆಂದರೆ ಏಲಾವನದಲ್ಲಿ ಹುಟ್ಟುವ ಗೀತ ಅಥವಾ ಏಲಾ ಛಂದಸ್ಸಿನಲ್ಲಿ ಹುಟ್ಟಿದ ಗೀತ ಎನ್ನಬಹುದು. ಕನ್ನಡದಲ್ಲಿ ' ಏಲಾ' ಅನ್ನುವ ತ್ರಿಪದಿ ವರ್ಗದ ಒಂದು ಛಂದಸ್ಸಿದೆ. ಇಲ್ಲಿ ಎರಡನೇ ಸಾಲಿನಲ್ಲಿ ಬನವಾಸಿ ಎಂಬ ಶಬ್ದವಿದೆ. ಪಂಪನ ಮನೋಹರ ಬನವಾಸಿಯಂತಹ ನಿಸರ್ಗರಮ್ಯ ಪ್ರದೇಶದಲ್ಲಿಯೇ ಹುಟ್ಟುವ ಕವನ ಇದು. ವನವಾಸಿ ಜನರು ಎಂಬ ಅರ್ಥವನ್ನೂ ಕಲ್ಪಿಸಬಹುದು. ಇಂತಹ ಸಸ್ಯಗಳಿಂದ ತುಂಬಿರುವ ಬನವಾಸಿಯ ತೋಟಗಳಲ್ಲಿ ಹೆಣ್ಣು ಮಕ್ಕಳು ಉಯ್ಯಾಲೆಗಳಲ್ಲಿ ( ದೋಲಾ) ನಿರಾಯಾಸವಾಗಿ ( ಲೀಲಾಂದೋಲಿತ) ತಮ್ಮನ್ನು ತೂಗಿಕೊಳ್ಳುತ್ತ, ಗೆಳೆಯ ಗೆಳತಿಯರ ಜೊತೆಗೆ ಹಾಡುತ್ತ ಕಾಲ ಕಳೆಯುವ ಸನ್ನಿವೇಶ. ಮೃಗಗಳನ್ನು ಸಹ ಮೈಮರೆಸುವಂತಹ ಈ ಸಂಗೀತವು ಕೇವಲ ಮಾನುಷಿಕ ಸಂಗೀತವಲ್ಲ. ಅದರ ಮೂಲ ದೇವಿ ಸರಸ್ವತಿಯ ವೀಣೆಯಲ್ಲಿದೆ. ಮೂರನೆಯ ಪ್ಯಾರಾದ ಮೊದಲ ಸಾಲು ಗಮನಿಸಿ. ಇವು ವರ್ಗೀಯ ವ್ಯಂಜನಗಳ ಕೊನೆಯ ಅನುನಾಸಿಕಗಳು ಮತ್ತು ಮಂತ್ರಾಕ್ಷರಗಳು. ಸಪ್ತಸ್ವರ ಹುಟ್ಟಿದ್ದು ಇವುಗಳಿಂದಲೇ. ಆದ್ದರಿಂದಲೇ ಸಂಗೀತಕ್ಕೆ ಗಂಧರ್ವ ಕಲೆ ಎನ್ನುತ್ತಾರೆ. ಸರಸ್ವತಿಯ ಸಂಗೀತದಂತಿರುವ ಈ ಸಖ ಸಖಿಯರ ಗೀತೆಯ ದನಿಯೇ ಸೆಲೆಯೊಡೆದು " ನದಿ" ಯಾಯಿತು. ನಾದದ ಈ ನದಿ ಬನವಾಸಿಯ ಘಟ್ಟಪ್ರದೇಶದಲ್ಲಿ ಅಂಕುಡೊಂಕಾಗಿಯೇ ( ಕೊಂಕೊಂಕೆನೆ) ಹರಿಯಬೇಕಲ್ಲವೇ. ಇಂತಹ ದೈವೀ ಸ್ವರವನ್ನು ಕಿನ್ನರಕಿನ್ನರಿಯರೇ ಹಾಡಬೇಕಲ್ಲ. ಬೇಂದ್ರೆ ಇಲ್ಲಿ " ಸ್ವರಮೂರ್ತಿಯ ಮಾಡಿ" ಎಂಬ ಶಬ್ದ ಬಳಸಿದ್ದಾರೆ. ಕಾಳಿದಾಸನ " ವಾಗರ್ಥವಿವ ಸಂಪ್ರಕ್ತೌ" ಎಂದ ಹಾಗೆ ಇದು. ಶಿವನು 'ವಾಕ್ ' ಆದಾಗ ಪಾರ್ವತಿ 'ಅರ್ಥ ' ಆಗುತ್ತಾಳೆ. ಹೃದಯಾಕೂತಿ" ಎಂದರೆ ಅಂತರಂಗದ ಹಂಬಲ. " ಯಾಳ" ಅಂದರೆ ಒಂದು ಬಗೆಯ ವಾದ್ಯ. ಜತಿ ಎನ್ನುವದು ಸಂಗೀತದ ಶಬ್ದ. ಸ್ವರಗಳನ್ನು ಎಬ್ಬಿಸಿ, ಕೇಳುಗರ ಮಬ್ಬನ್ನು ಚದುರಿಸಿ ಅವರಿಗೆ ಬಾಳ್ ಎನ್ನುವ ಒಸಗೆಯನ್ನು ಕೊಡುವದೇ ಈ ಏಲಾಗೀತೆ. ಈ ಹಾಡಿನ ಅರ್ಥವ್ಯಾಪ್ತಿ ವಿಸ್ತಾರ ಇನ್ನೂ ಬಹಳ ದೊಡ್ಡದು. ಬೇಂದ್ರೆಯವರ ಕಲ್ಪನಾ ವಿಲಾಸ ಇಲ್ಲಿ ಗರಿಗೆದರಿ ಏಲಾ ಛಂದಸ್ಸು ಮತ್ತು ಏಲಾವನಗಳನ್ನು ಜೋಡಿಸಿ ಅದರ ನಾದದಲ್ಲಿ ತಲ್ಲೀನವಾಗುವ ಒಂದು ವಿಶಿಷ್ಟ ಸ್ಥಿತಿಯನ್ನು ಬಣ್ಣಿಸುತ್ತದೆ. ಹೆಚ್ಚಿನ ವಿವರಣೆ ಬೇಕಾದವರು ಶ್ರೀ ಎಸ್. ಎಲ್. ದೇಶಪಾಂಡೆ ಅವರ " ಬೇಂದ್ರೆ ಶರೀಫರ ಕಾವ್ಯಯಾನ" ಎಂಬ ಪುಸ್ತಕ ಓದಬಹುದು. - ಎಲ್. ಎಸ್. ಶಾಸ್ತ್ರಿ

ಏಲಾಗೀತ ಕವನ
bottom of page