top of page

ಏಕಾಂತ – ಲೋಕಾಂತ   

ಜಾತ್ರೆಯ ಸಂದರ್ಭದಲ್ಲಿ ಅರ್ಚಕರು ದೇವರ ವಿಗ್ರಹವನ್ನು ಹೊತ್ತು ಗೋಪುರ ಪ್ರಾಕಾರದಲ್ಲಿ ಬಲಿ (ಪ್ರದಕ್ಷಿಣೆ) ಬರುವುದು ಸಂಪ್ರದಾಯ. ಜಾತ್ರೆಯ ಒಂದು ದಿನ ಪುರಪ್ರದಕ್ಷಿಣೆ ಬರಲಾಗುತ್ತದೆ. ಹಾಗೆ ಪ್ರದಕ್ಷಿಣೆ ಬರುತ್ತ ದೇವರು ಅಲ್ಲಲ್ಲಿ ಕಟ್ಟೆಗಳಲ್ಲಿ ಆರೂಢರಾಗಿ ಸಾರ್ವಜನಿಕರಿಂದ ಪೂಜೆ ಸ್ವೀಕರಿಸುತ್ತಾರೆ. ಕಟ್ಟೆಪೂಜೆಗಳು ಮುಗಿದು, ಪುರಪ್ರದಕ್ಷಿಣೆ ಆಗಿ ದೇವರು ವಾಪಸು ದೇವಸ್ಥಾನಕ್ಕೆ ಬರುವಾಗ ಮುಂಜಾನೆಯೇ ಆಗಿ ಬಿಡುತ್ತದೆ. ಅನಂತರ ತೆಪ್ಪೋತ್ಸವ, ಅವಭೃತ ನೆರವೇರುತ್ತದೆ. ಇದು ಜಾತ್ರೆಯ ಸ್ವರೂಪ. ವರ್ಷಕ್ಕೊಮ್ಮೆ ನಡೆಯುವ ಈ ಎಲ್ಲ ಆಚರಣೆಗಳು ಯಾತಕ್ಕಾಗಿ?

ಮುನ್ನೂರ ಅರವತ್ತು ದಿನಗಳೂ ದೇವರು ಗರ್ಭಗುಡಿಯ ಒಳಗೆ ಪೂಜೆ ಕೈಗೊಳ್ಳುತ್ತಾನೆ. ಆಗ ಸಾರ್ವಜನಿಕವಾಗಿ ದರ್ಶನ ಇರುವುದಿಲ್ಲ. ಏಕಾಂತವಾಸ ಮತ್ತು ದಿವ್ಯ ಸಾನ್ನಿಧ್ಯದಲ್ಲಿ ಪೂಜೆ ಜಪ ತಪ ಅನುಷ್ಠಾನಾದಿಗಳನ್ನು ಕೈಗೊಂಡು ಕಾರಣಿಕ ವೃದ್ಧಿ ಮಾಡಿಕೊಳ್ಳುವ ಆತನಿಗೆ ವರ್ಷಕ್ಕೊಮ್ಮೆ ಸಾರ್ವಜನಿಕ ದರ್ಶನ ನೀಡುವ ಅಪೇಕ್ಷೆ ಇರುತ್ತದೆ. ಮಂಗಳಕರವಾಗಿ ಎಲ್ಲರನ್ನೂ ನೋಡುತ್ತ ಲೋಕಸಂಚಾರ ಮಾಡುವ ಸಂದರ್ಭ ಅದು. ಪುರಪ್ರದಕ್ಷಿಣೆಯೂ ಅದೇ ಉದ್ದೇಶದ್ದು. ವರ್ಷವಿಡೀ ತಾನು ತುಂಬಿಕೊಂಡ ಕಾರಣಿಕವನ್ನು ಮರಳಿ ಸಾರ್ವಜನಿಕರಿಗೆ ಕರುಣಸಲಿರುವ ಸಂದರ್ಭ ಅದು. ಪೂಜೆ ಮಾಡಲು ಸಾಧ್ಯವಾಗದವರಿಗೆ, ದರ್ಶನಕ್ಕೆ ಬರಲು ಆಸ್ಪದ ಆಗದೇ ಇರುವವರಿಗೆ ವರ್ಷಕ್ಕೊಮ್ಮೆ ದೇವರನ್ನು ಕಣ್ತುಂಬಿಕೊಳ್ಳುವ ಸಂದರ್ಭ ಅದು.  

ಸಂಪನ್ನತೆ ಮತ್ತು ಸಮೃದ್ಧತೆಯನ್ನು ದೇವರ ರೂಪದಲ್ಲಿ ನಾವು ಕಂಡಿದ್ದೇವೆ. ಜಾತ್ರೆ ಎಂಬುದು ಅದರ ತುರೀಯಾವಸ್ಥೆ. ಆ ಆನಂದಮಯ ಆಚರಣೆಯಲ್ಲಿ ಬದುಕಿನ ಸಾರ್ಥಕತೆಯನ್ನು ಕಾಣುತ್ತೇವೆ. ಬದುಕನ್ನು ಹೀಗೆ ಸಂಭ್ರಮಿಸುವುದೇ ಜಾತ್ರೆಗಳ ಆಶಯವಾಗಿದೆ. ಎಲ್ಲರಿಗೂ ಒಟ್ಟಾಗಿ ದೇವರು ದರ್ಶನ ಕೊಡುವುದು, ಇಡೀ ಸಮೂಹವನ್ನು ಒಂದು ಘಟಕವಾಗಿ ನೋಡುವುದು ದೇವರ ಉದ್ದೇಶ. ಅದು ಸಾಧ್ಯವಾಗುವುದು ಜಾತ್ರೆ ಉತ್ಸವಗಳ ಸಂದರ್ಭದಲ್ಲಿ.

ಇದು ಬದುಕಿನಲ್ಲಿ ನಾವು ಹೇಗಿರಬೇಕು ಎಂಬುದಕ್ಕೆ ಒಂದು ದೃಷ್ಟಾಂತವೂ ಆಗಿದೆ ಎಂದು ನನಗನಿಸುತ್ತದೆ. ನಾವು ವರ್ಷ ಪೂರ್ತಿ ನಮ್ಮ ನಮ್ಮ ಕೆಲಸಗಳಲ್ಲಿ ತಲ್ಲೀನರಾಗಿರುತ್ತೇವೆ. ತಪಸ್ಸು ಮತ್ತು ಸಾಧನೆ ಎಂದು ಅದನ್ನು ಕರೆಯೋಣ. ನಾವು ಪಡೆದುಕೊಂಡಿರುವುದನ್ನು ಸಮಾಜಕ್ಕೆ ಧಾರೆಯೆರೆಯಬೇಕೆಂಬ ಸಂಕೇತವೇ ಜಾತ್ರೆ ಮತ್ತು ಉತ್ಸವದ ರೂಪದಲ್ಲಿ ನಮ್ಮ ಕಣ್ಣ ಮುಂದಿದೆ. ವರ್ಷದ ಬಹುಭಾಗ ’ಒಳಗನ್ನು’ ತುಂಬಿಸಿಕೊಳ್ಳಬೇಕು; ಸದಾ ಸಾರ್ವಜನಿಕವಾಗಿ ತಿರುಗಾಡಿಕೊಂಡಿದ್ದರೆ, ಹಾಳು ಹರಟೆಯಲ್ಲಿ ನಿರತವಾಗಿದ್ದರೆ ನಮ್ಮ ಕೊಡವನ್ನು ತುಂಬಿಸಿಕೊಳ್ಳುವುದು ಯಾವಾಗ? ಅಧ್ಯಯನ ನಿರತವಾಗದೆ, ಅರ್ಧ ತುಂಬಿದ ಅಥವಾ ಖಾಲಿ ಖಾಲಿ ಕೊಡದಿಂದ ಕೇವಲ ಸಪ್ಪಳ ಮಾತ್ರ ಬಂದೀತಷ್ಟೆ! ಅದಕ್ಕೆ ಬೆಲೆ ಸಿಗದು.

ವರ್ಷದ ಬಹುಭಾಗ ಕಾರಣಿಕವನ್ನು ತುಂಬಿಸಿಕೊಳ್ಳುವುದರಲ್ಲಿ ಕಳೆಯಬೇಕು. ಕೆಲವು ದಿನ ಅದನ್ನು ಉಳಿದವರಿಗಾಗಿ, ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ, ಸಾರ್ವಜನಿಕರಿಗಾಗಿ ಹಂಚಲು ಮೀಸಲಿಡಬಹುದು. ಇಲ್ಲವಾದರೆ ಚಾರಿತ್ರ್ಯಹನನ ನಿಶ್ಚಿತ!

ಸಸ್ಯಾದಿಗಳು ವರ್ಷಕ್ಕೊಮ್ಮೆ ಫಸಲು ನೀಡುವ ಹಾಗೆ, ನಾವು ಸಮಾಜದಲ್ಲಿ ಹೇಗಿರಬೇಕೆಂಬುದಕ್ಕೆ ಜಾತ್ರೆ ಉತ್ಸವಾದಿಗಳು ಒಂದು ಸಂಕೇತದಂತೆ ನನಗೆ ಕಾಣುತ್ತದೆ. ಅಧ್ಯಯನ ಅಥವಾ ಪಾಂಡಿತ್ಯದ ತಳಪಾಯವಿಲ್ಲದಿದ್ದರೆ ಮಾತುಗಳೆಲ್ಲ ಲೊಳಲೊಟ್ಟೆಯಾಗಿ ಬಿಡುತ್ತದೆ; ಜನ ಬೆಲೆ ಕೊಡುವುದಿಲ್ಲ ಮತ್ತು ಇರುವ ಅಲ್ಪಸ್ವಲ್ಪ ಮರ್ಯಾದೆಯೂ ಹೊರಟು ಹೋಗುತ್ತದೆ.

ಹೊರಗೆ ತಿರುಗಾಡಿದ ಬಳಿಕ ಮಂಗಲಸ್ನಾನ ಮಾಡಿ ದೇವರು ಮತ್ತೆ ಗರ್ಭಗುಡಿಯೊಳಗೆ ಪ್ರವೇಶಿಸಿ ಬಿಡುತ್ತಾನೆ. ನಮ್ಮ ಜೀವನದಲ್ಲಿ ಆಟಕ್ಕೆ, ತಿರುಗಾಟಕ್ಕೆ, ಸಾರ್ವಜನಿಕ ಚಟುವಟಿಕೆಗಳಿಗೆ ಅಥವಾ ಲೋಕಾಂತಕ್ಕೆ ಒಂದು ನಿರ್ದಿಷ್ಟ ಸಮಯ ಮೀಸಲಿಡಬೇಕು. ಯಾವತ್ತೂ ಲೋಕಾಂತವಾದರೆ ಏಕಾಂತ ಯಾವಾಗ? ಏಕಾಂತವೇ ಸಾಧನೆಗೆ ಮೂಲ; ತಪಸ್ಸು, ಸಾಧನೆ, ಸಿದ್ಧಿಗಳು ಏಕಾಂತದ ಫಲ. ಅದರ ಫಲಿತ ಲೋಕಾಂತಕ್ಕೆ.

ಚಿಪ್ಪಿನೊಳಗೆ ಸೇರದೆ ನೀರ ಹನಿ ಮುತ್ತಾಗದು! ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದವರು ಏಕಾಂತಕ್ಕೆ ಹೋಗುವುದು ಅನಿವಾರ್ಯ. ಏಕಾಂತವಿಲ್ಲದೆ ಲೋಕಾಂತಕ್ಕೆ ಬೆಲೆ ಇಲ್ಲ. ಜಾತ್ರೆ ಮತ್ತು ದೇವರ ಉತ್ಸವಗಳು ಈ ಏಕಾಂತ ಮತ್ತು ಲೋಕಾಂತವನ್ನು ತುಂಬ ಸಮರ್ಥವಾಗಿ ಸಂದೇಶರೂಪದಲ್ಲಿ ನಮಗೆ ಕಟ್ಟಿ ಕೊಡುತ್ತವೆ.


-ಡಾ. ವಸಂತಕುಮಾರ ಪೆರ್ಲ

ಏಕಾಂತ – ಲೋಕಾಂತ   
bottom of page