ಉಸಿರು ಮಾರಾಟಕ್ಕಿದೆ
ಉಸಿರು ಮಾರುತ್ತಾಳಂತೆ ಆಕೆ ರಸ್ತೆಯ ಬೀದಿಯಲಿ ಜಾತ್ರೆಯ ಗೌಜಿಯಲಿ. ಉಸಿರ ಕೂಗಿ-ಕೂಗಿ ಮಾರುತ್ತಾಳೆ ಆಕೆ ಆದರೂ ಖರೀದಿಸುವವರ ಸಂಖ್ಯೆ ಕಡಿಮೆಯೇ ಅದೆಷ್ಟು ಕಿರುಚಿದರೂ ಕೇಳುವವರಿಲ್ಲ ಅವಳ ಉಸಿರ. ಅವಳಿಗೂ ಉಳಿದವರಂತೆ ಆಡುವಾಸೆ ಆದರೆ ಬಿಟ್ಟು ಬಿಡದೆ ಕಾಡಿದೆ ಹಸಿವೆ ಅದಕೆ ಕೈಕಾಲು ಬಿದ್ದು ಮಾರುತ್ತಾಳೆ ತನ್ನುಸಿರೇ. ಅಕೆಗೋ ಅವಳೊದ್ದೊಂದೆ ಚಿಂತೆಯಲ್ಲ ಸುಂಬಳ ಸುರಿಸುತ್ತ ಚೀರುತ್ತಿರುವ ತಂಗಿಯ ಕಾಳಜಿಯೂ ಇದೆಯಲ್ಲ ಅದಕ್ಕೆ ಎರಡೇ ರೂಪಾಯಿಗೆ ಉಸಿರ ಮಾರಾಟಕ್ಕಿಟ್ಟಳಲ್ಲ. ಖರೀದಿ ಮಾಡುವವರೂ ಚೌಕಾಸಿ ಬಿಟ್ಟಿಲ್ಲ ಒಂದೇ ರೂಪಾಯಿಗೆ ಉಸಿರ ಕೇಳಿದರಲ್ಲ ಹಸಿವು ತಡೆಯಲಾಗದೆ ಆಕೆಯೂ ಮಾರಿಯೇ ಬಿಟ್ಟಳಲ್ಲ. ಹಸಿವಿನ ಮುಂದೆ ಉಸಿರಿಗೆಲ್ಲಿದೆ ಬೆಲೆ ಉಸಿರು ಉಳಿಯಬೇಕೆಂದರೆ ಹಸಿವು ಆರಬೇಕಲ್ಲವೇ? ಹಲವರ ಬದುಕು ಹಸಿವಿಗಾಗೇ ಮಾರಾಟವಾಗುತ್ತಿದೆಯಲ್ಲವೇ?? ಮತ್ತೆ ಹೊರಟಳಂತೆ ಕೂಗುತ್ತಾ, ಜಾತ್ರೆ ಬೀದಿಯ ಜನರ ಹಿಂಡಿನಲಿ ಅರಚುತ್ತಾ, ನನ್ನುಸಿರಿನ ಬೆಲೆ ಎರಡು ರೂಪಾಯಿ ಎನ್ನುತ್ತಾ. - ಮಹೇಶ್ ಹೆಗಡೆ ಮಾಳ್ಕೋಡ್ ಶ್ರೀ ಮಹೇಶ್ ಹೆಗಡೆ ಮಾಳ್ಕೋಡ್. ಇವರು ಹೊನ್ನಾವರ ತಾಲೂಕಿನ ಮಾಳ್ಕೋಡ್ ಗ್ರಾಮದವರು. ಪ್ರಸ್ತುತ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಹಿಂದಿ ಉಪನ್ಯಾಸಕರಾಗಿ ಹಾಗೂ ಬ್ರಿಲಿಯಂಟ್ ಎಜ್ಯುಕೇಶನ್ ಟ್ರಸ್ಟ್,ಹೊನ್ನಾವರ ಇದರ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ನುಡಿಮುತ್ತುಗಳನ್ನು 'ಸುಜ್ಞಾನಾಮೃತ' ಎಂಬ ಹೆಸರಿನಲ್ಲಿ ಬರೆದಿರುವ ಇವರು ಕವನ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಶೈಕ್ಷಣಿಕ ಮತ್ತು ಸಾರ್ವಜನಿಕ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿದ್ದಾರೆ ಚಿಂತಕರು,ವಾಗ್ಮಿಗಳು ಆಗಿರುವ ಇವರ ಮಾತುಗಳು ಯೂಟ್ಯೂಬ್ ಮತ್ತು ಪೇಸ್ ಬುಕ್ ನಲ್ಲಿ ಲಭ್ಯವಿವೆ. -ಸಂಪಾದಕ