ಉಳ್ಳೂರಿನ ‘ವಾಗ್ದೇವಿ’ಗೆ ಸಾಷ್ಟಾಂಗ ಪ್ರಣಾಮಗಳೊಂದಿಗೆ...
ಅನನ್ಯ ಪ್ರತಿಭೆ ಉಳ್ಳೂರು ಮೂಕಾಂಬಿಕಾ ಅಮ್ಮನವರ ಸಾಹಿತ್ಯ ರಚನೆಗಳ ಬಗ್ಗೆ ಈಚೆಗೆ ನಾಲ್ಕು ದಶಕಗಳಿಂದ ಕೇಳುತ್ತಲೇ ಇದ್ದೆನಾದರೂ ಅವರ ಸಮಗ್ರ ಕೃತಿಗಳನ್ನು ಸೂಕ್ಷ್ಮವಾಗಿ ಓದುವ ಅವಕಾಶ ನನಗೆ ಲಭಿಸಿದ್ದು ಅವರ ಮೊಮ್ಮಗ ಸುಬ್ರಹ್ಮಣ್ಯ ಐತಾಳರು ನಮ್ಮ ಮನೆಗೆ ಬಂದು ‘ಮೂಕಜ್ಜಿಯ ಸಮಗ್ರ ಕೃತಿಗಳ ಸಂಪುಟವೊಂದನ್ನು ಪ್ರಕಟಿಸುತ್ತಿದ್ದೇವೆ. ಅದಕ್ಕೊಂದು ಮುನ್ನುಡಿ ಬರೆದು ಕೊಡಬೇಕು’ ಎಂದಾಗ. ಅವರ ಕವನಗಳನ್ನೂ ಕಥೆಗಳನ್ನೂ ಆತ್ಮ ಚರಿತ್ರೆಯನ್ನೂ ಓದುತ್ತ ಹೋದಂತೆ ನನಗೆ ಆಶ್ಚರ್ಯ-ಸಂತೋಷಗಳ ಜತೆಗೇ ಅತೀವ ಸಂಕಟವೂ ಆಯಿತು. ಬದುಕಿನ ಆರಂಭದಿಂದಲೂ ಬಲು ಘೋರ ಕಷ್ಟಗಳನ್ನು ಎದುರಿಸಿದರೂ ಛಲ ಬಿಡದೆ ಸ್ವಯಂ ಪರಿಶ್ರಮದ ಮೂಲಕ ಓದಲು ಕಲಿತ, ಆದರೆ ಬರೆಯಲು ಬಾರದ ಓರ್ವ ಮಹಿಳೆ ಅದೆಷ್ಟು ಛಂದೋಬದ್ಧವಾಗಿ ಕವಿತೆಗಳನ್ನು ರಚಿಸಿದ್ದಾರೆ ಎಂದು ನನ್ನ ಕಣ್ಣುಗಳಿಂದ ಆನಂದ ಭಾಷ್ಪಗಳುರುಳಿದರೆ, ಈಕೆಯ ಹೆಸರು ಇಷ್ಟು ತಡವಾಗಿ-ಅಂದರೆ ಅವರಿಗೆ ಸುಮಾರು ಎಪ್ಪತ್ತು ವರ್ಷಗಳಾದ ಹೊತ್ತಿಗÉ- ಬೆಳಕಿಗೆ ಬಂತಲ್ಲ, ಶೈಕ್ಷಣಿಕವಾಗಿ ಅವರಿಗೆ ಹೆಚ್ಚು ಅವಕಾಶಗಳು ಲಭಿಸಿದ್ದರೆ ಹಾಗೂ ಸಾಹಿತ್ಯ ರಚನೆಗೆ ಹೆಚ್ಚಿನ ಪ್ರೋತ್ಸಾಹಗಳು ದೊರಕಿದ್ದರೆ ಅವರು ಎಷ್ಟೊಂದು ಎತ್ತರಕ್ಕೇರುತ್ತಿದ್ದರು ಎಂದು ಆಲೋಚಿಸುತ್ತಿದ್ದಂತೆ ಒಳಗಿಂದ ಸಂಕಟವುಕ್ಕಿ ಬಂತು. ಪುರುಷ ಪ್ರಧಾನವಾಗಿ ಬೆಳೆದು ಬಂದ ನಮ್ಮ ಸಮಾಜ ಹೆಣ್ಣು ಮಕ್ಕಳಿಗೆ ಶಿಕ್ಷಣ ಬೇಡವೆನ್ನುತ್ತ ಅವರನ್ನು ಮನೆಗೆಲಸಗಳಿಗೆ ಸೀಮಿತಗೊಳಿಸಿ ಮಕ್ಕಳನ್ನು ಹೆರುವ ಮತ್ತು ಅವರ ಲಾಲನೆ ಪೋಷಣೆ ಮಾಡುವ ಯಂತ್ರಗಳನ್ನಾಗಿಸಿದ್ದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಸಾಮಾಜಿಕ ಸ್ಥಿತಿಗತಿಗಳು ಮತ್ತು ಹೆಣ್ಣಿನ ಸ್ಥಾನ-ಮಾನಗಳು ತೀರಾ ಭಿನ್ನವಾಗಿದ್ದ ಹಿಂದಿನ ಕಾಲದಲ್ಲಿಯೂ ಅಡೆತಡೆಗಳನ್ನು ಸವಾಲಾಗಿ ಸ್ವೀಕರಿಸಿ ಅಕ್ಷರ ಲೋಕದಲ್ಲಿ ಸಾಧನೆಗಳನ್ನು ಮಾಡಿದ ಬೆರಳೆಣಿಕೆಯ ಕೆಲವು ಮಹಿಳೆಯರನ್ನು ನಾವು ಕಾಣುತ್ತೇವೆ. ಮೂಕಾಂಬಿಕಾ ಅವರಿಗಿಂತ ನೂರು ವರ್ಷಗಳ ಹಿಂದೆ ಬಂಗಾಳದಲ್ಲಿ ಬದುಕಿದ ರಾಸುಂದರಿದೇವಿ ಎಂಬ ಓರ್ವ ಮಹಿಳೆ ‘ ಹೆಣ್ಣುಮಕ್ಕಳು ವಿದ್ಯೆ ಕಲಿತರೆ ಕುಟುಂಬನಾಶವು ಶತಃಸಿದ್ಧ’ ಎಂಬ ನಂಬಿಕೆಯನ್ನು ಬೆಳೆಸಿಕೊಂಡ ಒಂದು ಪರಿಸರದಲ್ಲೇ ಬೆಳೆದರು. ಆದರೆ ಕದ್ದು ಮುಚ್ಚಿ ಅಕ್ಷರಗಳನ್ನು ಕಲಿತು ಓದಿ ಬರೆಯುವ ಸಾಮಥ್ರ್ಯವನ್ನು ರೂಢಿಸಿಕೊಂಡ ಆಕೆಯ ಹೆಸರು ಬಂಗಾಳಿ ಸಾಹಿತ್ಯ ಚರಿತ್ರೆಯಲ್ಲಿ ಅಜರಾಮರವಾಗಿ ಉಳಿಯಿತು. ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆಯವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳ ಕುರಿತು ನಮಗೆಲ್ಲ ಗೊತ್ತೇ ಇದೆ. ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಮತ್ತು ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ಬದುಕಿz ಮತ್ತು ಇಂದು ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆಯಲ್ಲಿ ಭದ್ರ ಸ್ಥಾನಗಳನ್ನು ಪಡೆದÀ ಸರಸ್ವತಿಬಾಯಿ ರಾಜವಾಡೆ (ಗಿರಿಬಾಲೆ),ನಂಜನಗೂಡು ತಿರುಮಲಾಂಬಾ, ಆರ್. ಕಲ್ಯಾಣಮ್ಮ, ಶ್ಯಾಮಲಾ ಬೆಳಗಾಂವಕರ, ದೇವಾಂಗನಾಶಾಸ್ತ್ರಿ, ಕಮಲಾದೇವಿ ಚಟ್ಟೋಪಾಧ್ಯಾಯ, ವಾಸಂತಿಬಾಯಿ ಪಡುಕೋಣೆ, ಸೀತಾದೇವಿ ಪಡುಕೋಣೆ, ಶಾಂತಾಬಾಯಿ ನೀಲಗಾರ, -ಇವರೆಲ್ಲರೂ ಮೂಕಾಂಬಿಕಾ ಅಮ್ಮನವರ ಸಮಕಾಲೀನರಾಗಿದ್ದವರು. ಇವರೆಲ್ಲರೂ ಮೂಕಾಂಬಿಕಾ ಅವರಂತೆ ಹತ್ತು-ಹನ್ನೆರಡು ವರ್ಷ ಪ್ರಾಯದಲ್ಲೇ ಬಾಲ್ಯವಿವಾಹವಾಗಿ ವೈಧವ್ಯದ ಸಂಕಷ್ಟಕ್ಕೆ ಗುರಿಯಾದವರೇ. ಆದರೆ ವ್ಯತ್ಯಾಸವೆಂದರೆ ಅವರೆಲ್ಲರಿಗೂ ಅವರ ತಂದೆ ಮತ್ತು ಕುಟುಂಬದವರ ನಿರಂತರ ಪ್ರೋತ್ಸಾಹ ಸಿಕ್ಕಿತು. ಶಾಲಾ ಶಿಕ್ಷಣ ಸಿಗದೇ ಹೋದರೂ ಮನೆಯಲ್ಲಿಯೇ ಅಕ್ಷರಾಭ್ಯಾಸ ಮಾಡುವ, ಸಾಹಿತ್ಯದ ಪತ್ರಿಕೆ-ಪುಸ್ತಕಗಳನ್ನು ಓದುವ ಅವಕಶಗಳು ಸಿಕ್ಕಿ, ಆ ಮೂಲಕ ಜ್ಞಾನಾರ್ಜನೆ ಮಾಡುವ ಅವಕಾಶಗಳು ದೊರೆತವು. ಆಧುನಿಕ ಶೈಲಿಯ ಸಾಹಿತ್ಯದ ಪರಿಚಯವನ್ನು ಮಾಡಿಕೊಂಡ ಅವರೆಲ್ಲರೂ ಸಣ್ಣ ಕಥೆ, ಕಾದಂಬರಿ, ನಾಟಕ ಮತ್ತು ವೈಚಾರಿಕ ಪ್ರಬಂಧಗಳನ್ನು ಬರೆದರು. ಹೀಗೆ ಇಂದು ಮಹಿಳಾ ಸಾಹಿತ್ಯ ಚರಿತ್ರೆಯ ಬಗ್ಗೆ ಮಾತನಾಡುವಾಗ ಅವರೆಲ್ಲರ ಹೆಸರುಗಳೂ ಉಲ್ಲೇಖಿತವಾಗುತ್ತವೆ. ಆದರೆ ಅಷ್ಟೇ ಪ್ರಖರವಾಗಿ ಆಶು ಕವಯಿತ್ರಿಯಾಗಿ ಶುದ್ಧ ಕನ್ನಡದಲ್ಲಿ ಛಂದೋಬದ್ಧವಾಗಿ ಕುಳಿತಲ್ಲಿ ನಿಂತಲ್ಲಿ ಸಾಂದರ್ಭಿಕವೂ ಅರ್ಥಪೂರ್ಣವೂ ಆದ ಕವಿತೆಗಳನ್ನು ರಚಿಸಿದ ಮೂಕಾಂಬಿಕಾ ಅಮ್ಮನವರು ಈ ಎಲ್ಲ ಅವಕಾಶಗಳಿಂದ ವಂಚಿತರಾಗಿದ್ದಾರಲ್ಲ, ಅವರಿಗಾದ ಈ ಅನ್ಯಾಯವನ್ನೆಣಿಸುವಾಗ ಕರುಳು ಕಿತ್ತು ಬರುವಷ್ಟು ಸಂಕಟವಾಗುತ್ತದೆ. ಮೂಕಾಂಬಿಕಾ ಅಮ್ಮನವರ ಬಗ್ಗೆ ಈಗಾಗಲೇ ಅನೇಕರು ಲೇಖನಗಳನ್ನೂ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. 1978ರಲ್ಲಿ ಅವರನ್ನು ಮೊದಲಬಾರಿಗೆ ಗುರುತಿಸಿದ ಖ್ಯಾತ ಲೇಖಕರಾದ ಕನರಾಡಿ ವಾದಿರಾಜ ಭಟ್ಟರು, ಮತ್ತು ಅವರ ಬಗ್ಗೆ ವಿಸ್ತøತ ಅಧ್ಯಯನವನ್ನು ಕೈಗೊಂಡ ಕನ್ನಡದ ಜಾನಪದ ಅಧ್ಯಯನಕಾರ್ತಿಯೂ ಸಂಶೋಧಕಿಯೂ ಆದ ಡಾ. ಗಾಯತ್ರಿ ನಾವಡ, ಮತ್ತು ಅನಂತರ ಅವರಿಗೆ ಪ್ರಚಾರ ನೀಡಿದ ಪತ್ರಕರ್ತ ಎ.ಎಸ್.ಎನ್ ಹೆಬ್ಬಾರ್, ಕನ್ನಡದ ಖ್ಯಾತ ಲೇಖಕಿ ವೈದೇಹಿ, ಪ್ರಾಧ್ಯಾಪಕಿ ರೇಖಾ ಬನ್ನಾಡಿ-ಹೀಗೆ ಹಲವರು ಅವರ ಕೌಟುಂಬಿಕ ವಿವರಗಳನ್ನು ನೀಡುತ್ತ ಮೂಕಾಂಬಿಕಾ ಅವರು ಹಿರಿಯ ವಿದ್ವಾಂಸರುಗಳು ಮತ್ತು ಯಕ್ಷಗಾನ ಪ್ರಸಂಗ ಕರ್ತರ ಬಳಗದಲ್ಲೇ ಹುಟ್ಟಿ ಬೆಳೆದವರು ಅಂದಿದ್ದಾರೆ. ಪ್ರಗತಿಪರ ಧೋರಣೆಯ ಕನ್ನಡದ ಮೇರು ಕವಿಗಳಾದ ಗೋಪಾಲಕೃಷ್ಣ ಅಡಿಗರು, ಅಲ್ಲದೆ ಬಿ.ಹೆಚ್. ಶ್ರೀಧರ್ ಕೂಡಾ ಮೂಕಾಂಬಿಕಾ ಅವರ ತೀರಾ ಹತ್ತಿರದ ಸಂಬಂಧಿಗಳು ಎಂದಿದ್ದಾರೆ. ಹಾಗಾದರೆ ಅವರ್ಯಾರೂ ಮೂಕಾಂಬಿಕಾ ಅವರ –ಮಾತ್ರವಲ್ಲದೆ ಅವರ ತಾಯಿ ಸರಸ್ವತಿಯಮ್ಮ ಅವರ- ಕವಿತೆ ಕಟ್ಟುವ ಅಥವಾ ಅದ್ಭುತ ಸಾಮಥ್ರ್ಯ-ಪ್ರತಿಭೆಗಳನ್ನು ಗಮನಿಸರಲೇ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ‘ಮಹಿಳೆಯರದ್ದು ಬರೇ ಅಡುಗೆಮನೆ ಸಾಹಿತ್ಯ’ವೆಂಬ ಉಡಾಫೆಯಿಂದಾಗಿ ಹೀಗಾಯಿತೆ? ಸರಸ್ವತಿಯಮ್ಮ ಅವರು ಬರೆದ ಖಂಡಕಾವ್ಯಗಳ ಶಕ್ತಿ ಕೂಡಾ ಬೆರಗು ಹುಟ್ಟಿಸುತ್ತದೆ. ಮಲೆಯಾಳದಲ್ಲಿ ಬಾಲಾಮಣಿಯಮ್ಮ ಎಂಬ ಕವಯಿತ್ರಿ ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ಬದುಕಿದವರು. ಬಹಳ ಪ್ರಸಿದ್ಧ ಕವಯಿತ್ರಿ. ಆಕೆಯ ಮಗಳೇ ಇಂದು ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ಧರಾಗಿರುವ ಕಮಲಾದಾಸ್. (ಅವರು ಕಥೆಗಳನ್ನು ಮಾಧವಿಕುಟ್ಟಿ ಎಂಬ ಕಾವ್ಯನಾಮದಲ್ಲಿ ಮಲೆಯಾಳದಲ್ಲೂ ಕವಿತೆಗಳನ್ನು ಕಮಲಾದಾಸ್ ಎಂಬ ಹೆಸರಿನಲ್ಲಿ ಇಂಗ್ಲಿಷ್‍ನಲ್ಲೂ ಬರೆದರು). ಅವರಿಬ್ಬರಿಗೂ ಕೌಟುಂಬಿಕ ಪರಿಸರದ ಬೆಂಬಲ ಸಿಕ್ಕಿತ್ತು. ಸರಸ್ವತಿಯಮ್ಮ ಮತ್ತು ಮೂಕಾಂಬಿಕಾ ಅಮ್ಮನವರಿಗೂ ಇಂತಹ ಪರಿಸರ ಮತ್ತು ಪ್ರೋತ್ಸಾಹ ಸಿಕ್ಕಿದ್ದರೆ ಅವರು ಎಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರೋ ಕಲ್ಪನೆಗೂ ನಿಲುಕುವುದಿಲ್ಲ. ಈ ಕೃತಿಯಲ್ಲಿ ಮೂಕಾಂಬಿಕಾ ಅವರ ಬದುಕಿನ ಕರಿತಾದ ವಿವರಗಳು, ಅವರು ಹುಟ್ಟಿ ಬೆಳೆದ ಸಂಪ್ರದಾಯ ಶರಣ ಕುಟುಂಬ-ಪರಿಸರ- ವಾತಾವರಣ-ಬಂಧು ಬಳಗದವರ ವಿವರಗಳಿವೆ. ಸ್ವತಃ ಕವಯಿತ್ರಿಯಾಗಿದ್ದ ಅಮ್ಮ ಸರಸ್ವತಿಯಮ್ಮನಿಂದ ಚಿಕ್ಕವಳಿರುವಾUಲೇ ಮೂಕಾಂಬಿಕಾÀ ಕಲಿತ ಪದ್ಯಗಳು ಮತ್ತು ಕೇಳಿದ ಕಥೆಗಳು ಆಕೆಯ ಬುದ್ಧಿಶಕ್ತಿಗೆ ಸಾಣೆಯಿಟ್ಟದ್ದು, ಹತ್ತನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಅಂದಿನ ಪದ್ಧತಿಯಂತೆ ಮದುವೆಯಾಗಿದ್ದು, ಗಂಡನ ಮನೆಯಲ್ಲಿ ಆಕೆ ಅನುಭವಿಸಿದ ನರಕ ಯಾತನೆ, ಹದಿನೈದು ವಯಸ್ಸಿನಲ್ಲಿ ಗಂಡು ಮಗುವಿನ ಜನನ, ಹದಿನಾರಕ್ಕೆ ಗಂಡನ ಮರಣ ಮತ್ತು ಪುರೋಹಿತg ಆಜ್ಞೆಯ ಪ್ರಕಾರ ಬ¯ವಂತವಾಗಿ ಆಕೆಯ ಕೇಶಮುಂಡನ-ಹೀಗೆ ಅನೇಕ ಕರಾಳ ಚಿತ್ರಗಳಿವೆ. ಮೂಕಾಂಬಿಕಾಗೆ ಅತೀವ ನೋವು ನೀಡಿದ ಕೇಶಮುಂಡನದ ಬಗ್ಗೆ ಅವರು ರಚಿಸಿದ ಕವಿತೆಯನ್ನು ಈ ಕೃತಿಯೊಳಗೆ ಅನೇಕರು ತಮ್ಮ ಲೇಖನಗಳಲ್ಲಿ ಉದ್ಧರಿಸಿದ್ದಾರೆ. ಅವರ ಪ್ರಗತಿಪರ ನಿಲುವು ವ್ಯಕ್ತವಾಗುವ ಈ ಕವನದಲ್ಲಿ ಅವರು ‘ತಲೆ ಬೋಳಿಸಿದರೆ ಕಾಮನಿಗ್ರಹ ಸಾಧ್ಯವೇ?’ ಎಂದು ಪ್ರಶ್ನಿಸುತ್ತಾರೆ. ಗಂಡನ ಮನೆಯ ಹಿಂಸೆ ತಾಳಲಾರದೆ ತೌರು ಮನೆಗೆ ಬಂದು ನೆಲೆಯೂರುವ ಆಕೆ ಅಣ್ಣನ ಕಷ್ಟ ನೋಡಲಾರದೆ ಹೊಲ-ಗದ್ದೆಗಳಲ್ಲಿ ದುಡಿದು, ಹೈನುಗಾರಿಕೆ ಮಾಡಿ ತನ್ನ ಮಗನನ್ನು ಸಾಕುತ್ತಾಲೆ. ದೈಹಿಕ ಪರಿಶ್ರಮದ ಬಗ್ಗೆ ಆಕೆ ಎಂದೂ ಹಿಂದೇಟು ಹಾಕಿದವಳಲ್ಲ. ಈ ಎಲ್ಲ ಸಂದರ್ಭಗಳಲ್ಲೂ ಹೆಜ್ಜೆ ಹೆಜ್ಜೆಗೂ ಆಕೆಯ ಬಾಯಿಂದ ಕವನಗಳು ಉದುರುತ್ತಲೇ ಇರುತ್ತವೆ. ಶಾಲೆಗೆ ಹೋದ, ಬರೆಯಲು ಬಾರದ ಆಕೆ ಅಮ್ಮನ ಸೂಚನೆಯಂತೆ ಅಕ್ಷರಗಳನ್ನು ಜೋಡಿಸುತ್ತ ಓದಲು ಕಲಿಯುತ್ತಾಳೆ. ಭಾರತೀಯ ಮಹಾಕಾವ್ಯಗಳು, ಪುರಾಣಗಳ ಪರಿಚಯ ಮಾಡಿಕೊಳ್ಳುತ್ತಾಳೆ. ಸುತ್ತು ಮುತ್ತಲೆಲ್ಲ ಯಕ್ಷಗಾನದ ವಾತಾವರಣವಿದ್ದುದರಿಮದ ಕವನ ರಚನೆಯ ಕಲೆ ಆಕೆಗೆ ಕರಗತವಾಗುತ್ತದೆ. ಪ್ರಾಸಬದ್ಧವಾದ ಕವನಗಳನ್ನು ಭಾಮಿನಿ, ವಾರ್ಧಕ ಷಟ್ಪದಿಗಳಲ್ಲೂ , ಸಾಂಗತ್ಯದಲ್ಲೂ ಜಾನಪದ-ಲಾವಣಿಯ ಶೈಲಿಯಲ್ಲೂ ರಚಿಸುವುದನ್ನು ಆಕೆ ರೂಢಿಸಿಕೊಳ್ಳುತ್ತಾಳೆ. ಒಮ್ಮೆ ಪದ್ಯ ರಚಿಸಿದರೆ ಮಸ್ತಿಷ್ಕದಲ್ಲಿ ಅದನ್ನು ಭದ್ರವಾಗಿ ಕಾಪಿಟ್ಟುಕೊಳ್ಳುವ ಅದ್ಭುತ ನೆನಪಿನ ಶಕ್ತಿಯೂ ಆಕೆಯಲ್ಲಿತ್ತು. ಆದ್ದರಿಂದಲೇ ಆಕೆಗೆ ಸುಮಾರು ಎಪ್ಪತ್ತು ವರ್ಷವಾದಾಗ ಆಕೆ ಸಮಾಜದಿಂದ ಆಕಸ್ಮಿಕವಾಗಿ ಗುರುತಿಸಲ್ಪಟ್ಟಾಗ ಈ ಕೃತಿಯಲ್ಲಿರುವ ಕವನಗಳನ್ನು ದಾಖಲೀಕರಿಸಿಕೊಳ್ಳುವುದು ಸಾಧ್ಯವಾಯಿತು. ‘ಮೂಕಜ್ಜಿಯ ಹಾಡುಗಳು’ ಎಂಬ 2000ನೇ ಇಸವಿಯಲ್ಲಿ ಪ್ರಕಟವಾದ ಕೃತಿಯಲ್ಲಿ ಕನರಾಡಿ ವಾದಿರಾಜ ಭಟ್ಟರು ಮತ್ತು ಮೂಕಾಂಬಿಕಾ ಅವರ ಮೊಮ್ಮಗ ಸುಬ್ರಹ್ಮಣ್ಯ ಐತಾಳ್ ಇಬ್ಬರೂ ಸೇರಿ ಅವರ ಅನೇಕ ಕವನಗಳನ್ನೂ ಅವರ ಬಗ್ಗೆ ಪ್ರಕಟವಾದ ಕೆಲವು ಲೇಖನಗಳನ್ನೂ ಸಂಪಾದಿಸಿದ್ದಾರೆ. ಪ್ರಸ್ತುತ ಈ ಕೃತಿಯಲ್ಲೂ ಅವೇ ಪದ್ಯಗಳನ್ನು ಇನ್ನಷ್ಟು ಲೇಖನಗಳೊಂದಿಗೆ ಮತ್ತು ತಾಯಿ ಸರಸ್ವತಿಯಮ್ಮನವರ ‘ಕುಂದಾಪುರ ವರ್ಣನಂ’ ಮತ್ತು ‘ಮಾರಿಕಾಂಬಾ ಮಹಾತ್ಮೆ’ ಎಂಬ ಎರಡು ಕಾವ್ಯ ಕೃತಿಗಳೊಂದಿಗೆ ಪ್ರಕಟಿಸಲಾಗಿದೆ. ಮೂಕಾಂಬಿಕಾ ಅವರ ಕವಿತೆಗಳನ್ನು ಇಲ್ಲಿ ಅವುಗಳ ವಸ್ತು, ವಿಷಯ, ಶೈಲಿ, ಛಂದಸ್ಸುಗಳಿಗನುಸಾರವಾಗಿ ಸಂಪಾದಕರು ಅತ್ಯಂತ ವ್ಯವಸ್ಥಿತವಾಗಿ ವಿಂಗಡಿಸಿದ್ದಾರೆ. ವೈದೇಹಿ, ವಿವೇಕ ರೈ ಮತ್ತು ಗಾಯತ್ರಿ ನಾವಡರ ಲೇಖನಗಳೊಂದಿಗೆ ಇಲ್ಲಿ ಜನಾರ್ದನ ಮರವಂತೆ, ರೇಖಾ ವಿ, ಬನ್ನಾಡಿ ಮೊದಲಾದವರ ಲೇಖನಗಳೂ ಇವೆ. ಹೀಗೆ ಇದು ಮೂಕಾಂಬಿಕಾ ಅವರ ಬದುಕು, ವ್ಯಕ್ತಿತ್ವ ಮತ್ತು ಕೃತಿಗಳ ಒಂದು ಸಮಗ್ರ ನೋಟವನ್ನು ಕಟ್ಟಿಕೊಡುತ್ತದೆ. ಮೂಕಾಂಬಿಕಾ ಅವರು ತಮ್ಮ ಬದುಕಿನುದ್ದಕ್ಕೂ ಎದುರಿಸಿದ ಕಷ್ಟ-ಕೋಟಲೆಗಳ ಮತ್ತು ದುರಂತಗಳ ಬಗ್ಗೆ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ತಮ್ಮ ಬದುಕಿಗೆ ನಿಸ್ವಾರ್ಥ ಮನಸ್ಸಿನಿಂದ ಆಸರೆ ನೀಡಿದ ಅಣ್ಣನ ಸಾತ್ವಿಕತೆಯ ಬಗೆಗೂ, ಅವರ ಬದುಕಿನ ಉತ್ತರಾರ್ಧದಲ್ಲಿ ಬಂದು ಅವರಿಗೆ ಸಾರಸ್ವತ ಲೋಕದಲ್ಲಿ ಪುಟ್ಟದಾದರೂ ಒಂದು ಸ್ಥಾನವನ್ನು ಕಲ್ಪಿಸಿದ ಹಲವು ವ್ಯಕ್ತಿಗಳ ಔದಾರ್ಯದ ಬಗ್ಗೆ ಕವನಗಳನ್ನು ರಚಿಸಿದ್ದಾರೆ. ಸಮಾಜದಲ್ಲಿ ತಮ್ಮ ಸುತ್ತಮುತ್ತ ನೋಡಿದ, ಕೇಳಿ ತಿಳಿದುಕೊಂಡ ವಿಚಾರಗ¼ನ್ನು ತಮ್ಮ ಚಿಂತನೆಯ ಮೂಸೆಯಲ್ಲಿಟ್ಟು ಹದಪಾಕ ಮಾಡಿ ಕವನಗಳನ್ನು ರಚಿಸಿದ್ದಾರೆ. ರಾಜಕೀಯದ ಆಗುಹೋಗುಗಳನ್ನೂ ಗಮನಿಸಿ ಐತಿಹಾಸಿಕ ಪಾತ್ರವಾದ ಝಾನ್ಸಿರಾಣಿಯ ಬಗ್ಗೆ, ಆಂಗ್ಲರು ಭಾರತೀಯರ ಬದುಕನ್ನು ಹೀನಸ್ಥಿತಿಗೆ ತಂದÀ ಬಗ್ಗೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಾಗಾಂಧಿ, ಪ್ರಧಾನಿ ನೆಹರೂ ಮತ್ತು ಇಂದಿರಾಗಾಂಧಿ, ಸಂಜಯಗಾಂಧಿ ಮೊದಲಾದವರ ಬಗ್ಗೆ ಬೇರೆ ಬೇರೆ ಸಂದರ್ಭಗಳಲ್ಲಿ ತಮಗನ್ನಿಸಿದ್ದನ್ನು ಕವನ ರೂಪದಲ್ಲಿ ನಿರೂಪಿಸಿದ್ದಾರೆ. ಸಾಮಾಜಿಕ ಸ್ಥಿತಿ ಗತಿಗಳನ್ನು ವಿಶ್ಲೇಷಿಸುತ್ತ, ಜನರು ಬೆಳೆಸಿಕೊಳ್ಳುವ ಮೂಢ ನಂಬಿಕೆಗಳನ್ನು ಖಂಡಿಸಿದ್ದಾರೆ. ವಿಧವೆಯರ ಅವಗಣನೆ,, ಸ್ವಚ್ಛತೆಯ ಬಗ್ಗೆ ಗಮನ ಕೊಡದೆ ಮಡಿಯುಟ್ಟುಕೊಳ್ಳುವ ಮೌಢವನ್ನು ವಿರೋಧಿಸಿದ್ದಾರೆ., ಹೇಣ್ಣುಮಕ್ಕಳನ್ನು ವಿದ್ಯಾವಂತೆಯರಾಗಿ ಮಾಡಬೇಕು, ಹೆಣ್ಣುಮಕ್ಕಳು ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛೆಯಿಂದ ವರ್ತಿಸ ಬಾರದು ಮುಂತಾದ ಪ್ರಗತಿಪರ ಚಿಂತನೆಗಳ ಮುಖವಾಣಿಯಾಗುವ, ಸರಳ-ಸುಂದರ ಪದ ವಿನ್ಯಾಸಗಳಿಂದ ಕೂಡಿದ ಛಂದೋಬದ್ಧ ಕವಿತೆಗಳನ್ನು ಬರೆದಿದ್ದಾರೆ. ಪರಿಸರದ ಬದುಕಿನ ಕುರಿತಾದ ಕವನಗಳೂ, ಯುವಜನಾಂಗವನ್ನು ಎಚ್ಚರಿಸುವ ಕವನಗಳೂ ಪ್ರೀತಿ-ಪ್ರಣಯಗಳ ಕುರಿತಾದ ಕವನಗಳೂ ಅವರ ಸಂಕಲನದಲ್ಲಿವೆ. ಕುಟುಂಬ ಯೋಜನೆಯ ಅಗತ್ಯವನ್ನು ಕುರಿತಾದ ಒಂದು ಕವನ ಬಹಳ ಅರ್ಥಪೂರ್ಣವಾಗಿದೆ. ಅವರು ರಚಿಸಿದ ಹಲವಾರು ಭಕ್ತಿಗೀತೆಗಳು ಮತ್ತು ಕೃಷಿಪುರದ ( ಉಳ್ಳೂರಿನ) ಕೃಷ್ಣನ ಕುರಿತಾದ ಗೀತೆಗಳು ಯಾವ ವಾಗ್ಗೇಯಕಾರರ ರಚನೆಗಳಿಗೂ ಕಡಿಮೆಯಿಲ್ಲ. ಅಲ್ಲದೆ ಅವರ ಕೆಲವು ಗೀತೆಗಳಲ್ಲಿ ವ್ಯಕ್ತವಾಗುವ ಅವರ ಜಾತ್ಯಾತೀತ ನಿಲುವು ಅಚ್ಚರಿ ಹುಟ್ಟಿಸುತ್ತದೆ. ಕೃಷ್ಣನ ಕುರಿತು ಮಾತ್ರವಲ್ಲದÉ ಯೇಸುಸ್ವಾಮಿಯ ಕುರಿತೂ ಒಂದು ಸುಂದರ ಕವಿತೆಯನ್ನು ಅವರು ರಚಿಸಿದ್ದಾರೆ. ಬದುಕಿನ ವಿವಿಧ ಹಂತಗಳಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ಜೀವನಮೌಲ್ಯಗಳನ್ನು ಬೋಧಿಸುವ ಹಲವು ಕವನಗಳು ಮೂಕಾಂಬಿಕಾ ಅವರ ಸಂಚಯದಲ್ಲಿವೆ. ಸಾಮಾಜಿಕ ಜೀವನದ ಹಲವು ಪ್ರಮುಖ ಸಂದರ್ಭಗಳಲ್ಲಿ ಹಾಡುವ ಜೋಗುಳ ಮತ್ತು ಶೋಭಾನೆ ಪದಗಳು ಸದಾ ಅವರ ನಾಲಿಗೆಯ ತುದಿಯಲ್ಲಿರುತ್ತಿದ್ದವು. ವಿಧವೆಯರು ಅವನ್ನು ಹಾಡಬಾರದೆಂಬ ನಿಷೇಧವಿದ್ದದ್ದರಿಂದ ಅವರು ಸುಮಂಗಲೆಯರೆನ್ನಿಸಿದ ಇತರ ಹೆಂಗಸರಿಗೆ ಅವುಗಳನ್ನು ಹೇಳಿಕೊಡುತ್ತಿದ್ದರು. ಕಥೆಗಳ ಕಣಜವಾಗಿದ್ದ ಅವರಲ್ಲಿದ್ದ ಅದ್ಭುತ ವಾಗ್ವೈಖರಿಗೆ ಮನಸೋತ ಊರಿನ ನೂರಾರು ಮಕ್ಕಳು ಅವರು ಹೇಳುವ ಕಥೆಗಳನ್ನು ಮಂತ್ರ ಮುಗ್ಧರಾಗಿ ಕುಳಿತು ಕೇಳುತ್ತಿದ್ದರಲ್ಲದೆ ಕಥೆ ಹೇಳಿರೆಂದು ಅವರನ್ನು ಸದಾ ಪೀಡಿಸುತ್ತಿದ್ದರು ಕೂಡಾ. ಹೀಗೆ ಕಡುಕಷ್ಟದÀ ಶರಶಯ್ಯೆಯ ಮೇಲೆ ಸಂತಳಂತೆ ‘ಕಲ್ಲರಳಿ ಹೂವಾಗಿ ಎಲ್ಲರಿಗೆ ಬೇಕಾದವಳಾಗಿ’ ಸಮಾಜ ಸೇವೆಯೆಂಬ ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬದುಕಿದÀ ಮೂಕಾಂಬಿಕಾ ನಮ್ಮ ಕಣ್ಣುಗಳು ಹನಿಗೂಡುವಂತೆ ಮಾಡುತ್ತಾರೆ. ಮೂಕಾಂಬಿಕಾ ಅವರು ರಚಿಸಿದ ಕವನಗಳಲ್ಲಿ ಕಾಣುವ ಛಂದಸ್ಸು, ಪ್ರಾಸ-ಲಯಗಳು ಮತ್ತು ಶಬ್ದ ವೈಭವಗಳಿಗೆ ಸಾಕ್ಷಿಯಾಗಿ ಒಂದೆರಡು ದೃಷ್ಟಾಂತಗಳನ್ನು ಇಲ್ಲಿ ಕೊಡಲೇ ಬೇಕೆಂದು ನನಗೆ ತೀವ್ರವಾಗಿ ಅನ್ನಿಸಿದೆ : • ‘ಶ್ರೀಕ್ಷೇತ್ರ ಕೊಲ್ಲೂರು’ ಕವಿತೆಯಲ್ಲಿ ಅವರು ಕ್ಷೇತ್ರದ ಸ್ಥಳ ಮಹಿಮೆ ಮತ್ತು ಅಲ್ಲಿನ ಸೌಕರ್ಯಗಳ ಕುರಿತು ಹೇಳಿದ್ದನ್ನು ನೋಡಿ. ಇದು ವಾರ್ಧಿಕ ಷಟ್ಪದಿಯಲ್ಲಿದೆ : ದಶ ದಿಶೆಗಳಿಂ ಬರುವ ಯಾತ್ರಾರ್ಥಿಗಳ್ಗಿಲ್ಲಿ ವಸತಿಗನುಕೂಲವಪ್ಪಂತೆ ಸುಂದರವಾಗಿ ಹೊಸ ರೀತಿಯಿಂದ ನಿರ್ಮಿಸಿದ ಕೋಣೆಗಳಿಹವು ತಂಗಾಳಿ ಬೆಳಕಿರ್ಪುದು ಹಸಿವಿಂಗೆ ದೇವಿಯ ಪ್ರಸಾದವನ್ನೀಯುವರ್ ಕಸನುಸಿಗಳಿರದೆ ಶುಚಿರುಚಿಯಾಗಿ ಮಾಡಿರುವ ಬಿಸಿಬಿಸಿ ಚಹಾಕಾಫಿ ಪಾನೀಯವನ್ನೀವ ಉಪಾಹಾರ ಗೃಹವಿರ್ಪುದು ( ಮೂಕಜ್ಜಿಯ ಹಾಡುಗಳು ಪು.45) ** ಜಾನಪದ ಶೈಲಿಯಲ್ಲಿ ರಚಿಸಿದ ತ್ರಿಪದಿಯಲ್ಲಿರುವ ಉಪದೇಶವಾಕ್ಯಗಳನ್ನು ನೋಡಿ : ನೆಂಟರೊಳಗಿನ ಜಗಳ ಗಂಟೆ ಬಾರಿಸಿದಂತೆ ಒಂಟೆತ್ತಿನ ಕಟ್ಟಿ ಕೆರೆದಂತೆ, ಅಣ್ಣಯ್ಯ ನೆಂಟರ ಜಗಳ ತರವಲ್ಲ ( ಮೂಕಜ್ಜಿಯ ಹಾಡುಗಳು ಪು.90 ) *** ಮಹಾತ್ಮಾ ಗಾಂಧಿಯ ಬಗ್ಗೆ ರಚಿಸಿದ ಒಮದು ಕವನ ಭಾಮಿನಿ ಷಟ್ಪದಿಯಲ್ಲಿದೆ : ಶ್ರೀಮದಖಿಲ ಗುಣಾತ್ಮನಹನಿ ಸ್ಸೀಮ ಮೋಹನದಾಸನೆಂಬು ದ್ದಾಮ ಸಾಹಸಿ ಜನಿಸಿದನು ಭಾರತಿಯ ಜಠರದಲಿ ಆ ಮಹಿಮನುದಿಸಲ್ಕೆ ಧೃಣಿಯು ಸೋಮ ಮಂಡಲವಾಯ್ತು ಸುಜನ ಸ್ತೋಮ ತಾರೆಗಳಾಯ್ತು ಚಂದ್ರಮನಾದನಾ ಗಾಂಧಿ (ಮೂಕಜ್ಜಿಯ ಹಾಡುಗಳು ಪು.63) **** ಹಿಂದೆ ಹಳ್ಳಿಗಳಲ್ಲಿ ಸ್ಟೋರು’ ಎಂದು ಕರೆಯುತ್ತಿದ್ದ ರೇಷನ್ ಶಾಪಿನಲ್ಲಿ ನಡೆಯುತ್ತಿದ್ದ ಭ್ಷ್ಟಾಚಾರವನ್ನು ಯಲಿಗೆಳೆಯುವ ಈ ಕವನ ನೋಡಿ : ಹಳ್ಳಿ ಸ್ಟೋರೊಳಗೆಳ್ಳಿನಿತಾದರು ಒಳ್ಳೆಯ ನಡತೆಗಳಲ್ಲಿಲ್ಲ ಸುಡು ಕಳ್ಳ ಸಂತೆಗದು ಮಿತಿಯಿಲ್ಲ ಕೂಳಿಲ್ಲದವರ ಕೇಳುವರಿಲ್ಲ ಕೊಳ್ಳೆ ಸುಲಿಗೆಯನು ಮಾಡುವರು ಹಗಲ್ ಗಳ್ಳತನದೊಳಿಲ್ಲಿಹರಲ್ಲ ( ಮೂಕಜ್ಜಿಯ ಹಾಡುಗಳು, ಪು. 102) ಹೀಗೆ ಮೂಕಾಂಬಿಕಾ ಅವರ ಪದ ವಿನ್ಯಾಸದ ಸಂದರ್ಯಕ್ಕೆ ಮತ್ತು ಜ್ಞಾನ-ತಿಳಿವಳಿಕೆ-ಚಿಂತನಾಶಕ್ತಿಗಳಿಗೆ ನೂರಾರು ಉದಾಹರಣೆಗಳನ್ನು ಕೊಡುತ್ತ ಹೋಗಬಹುದು. ಇಂಥ ಮಹಾ ಪ್ರತಿಭೆಯನ್ನು ಸಾರಸ್ವತ ಲೋಕ ಗುರತಿಸಿದ್ದು ತೀರಾ ತಡವಾಗಿ. ಅಡಿಗಡಿಗೂ ತಡೆಯಿಲ್ಲದೆ ಅವರ ಬಾಯಿಂದ ಉದುರುತ್ತಿದ್ದ ಕವಿತೆಗಳನ್ನು ಹೆಕ್ಕಿ ದಾಖಲಿಸುವವರು ಅವರ ಬದುಕಿನ ಆರಂಭದಲ್ಲೇ ಸಿಗುತ್ತಿದ್ದರೆ ಅವುಗಳ ರಾಶಿ ಅದೆಂಥ ಅಗಾಧ ಪ್ರಮಾಣದ್ದಾಗುತ್ತಿತ್ತೋ ಬಲ್ಲವರಾರು? ಇದುವರೆಗೆ ಅವರನ್ನು ಉಡುಪಿ ಜಿಲ್ಲೆಯ ನಾಲ್ಕಾರು ಕಡೆ ವೇದಿಕೆಗೆ ಕರೆದು ಸಮ್ಮಾನಿಸಿದ್ದು, ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮಾಳನದ ಅಧ್ಯಕ್ಷ ಪದವಿ ನೀಡಿ ಗೌರವಿಸಿದ್ದು, ಮಂಗಳೂರು ವಿ.ವಿ.ದ ಕನ್ನಡ ಪಠ್ಯ ಪುಸ್ತಕದಲ್ಲಿ ಅವರ ಒಂದು ಕವನವನ್ನು ಸೇರಿಸಿಕೊಂಡದ್ದು ಬಿಟ್ಟರೆ ರಾಜ್ಯ ಮಟ್ಟದಲ್ಲಿ ಬೆಂಗಳೂರು ದೂರದರ್ಶನದ ‘ಸಿರಿಗಂಧ’ ಕಾರ್ಯಕ್ರಮದಲ್ಲಿ ಅವರನ್ನು ಪರಿಚಯಿಸಿದ್ದು ಮಾತ್ರ. ರಾಷ್ಟ್ರಮಟ್ಟದಲ್ಲೇ ಪ್ರಶಸ್ತಿ-ಬಿರುದುಗಳನ್ನು ನೀಡಿ ಸಮ್ಮಾನಿಸಬೇಕಾಗಿದ್ದ ಓರ್ವ ಕವಿಯ ಬಗ್ಗೆ ಸರಕಾರ ಸುಮ್ಮನಿದ್ದುದರ ಬಗ್ಗೆ ಡಾ.ಗಾಯತ್ರಿ ನಾವಡರು ತಮ್ಮ ಒಂದು ಲೇಖನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು ಅತ್ಯಂತ ಸಹಜವೇ ಆಗಿದೆ. ಅದೇನೇ ಇರಲಿ, ಉಳ್ಳೂರು ಮೂಕಾಂಬಿಕಾ ಅವರ ಹೆಸರು ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆಯ ಆರಂಬಿಕರ ಪಟ್ಟಿಯಲ್ಲಿ ದಾಖಲೀಕೃತಗೊಂಡು ಅಜರಾಮರವಾಗಿ ಉಳಿಯುವಂತೆ ಮಾಡುವ ಹೊಣೆ ನಮ್ಮ ಮೇಲಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ಪ್ರಾಯಶಃ ಅದೇ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಐತಾಳರು ಪ್ರಕಟಿಸುತ್ತಿರುವ ಅವರ ಸಮಗ್ರ ಕೃತಿಗಳ ಕುರಿತಾದ ಈ ಪುಸ್ತಕವು ಯಶಸ್ವಿಯಾದೀತೆಂದು ನಾನು ಹಾರೈಸುತ್ತೇನೆ. ಅಲ್ಲದೆ, ಇನ್ನೊಂದು ಮಾತು. ‘ಹೆಸರಿನಲ್ಲೇನಿದೆ?’ ಎಂದು ನಾವು ಎಷ್ಟೇ ಹೇಳಿದರೂ, ಅವರನ್ನು ವೈಯಕ್ತಿಕ ಸಂಬಂಧದ ನೆಲೆಯಲ್ಲಿ ಆತ್ಮೀಯವಾಗಿ ‘ಮೂಕಜ್ಜಿ’ ಎಂದು ಕರೆಯಬಹುದಾದರೂ ಓರ್ವ ಕವಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅವರನ್ನು ಗುರುತಿಸುವಾಗ ‘ಅಜ್ಜಿ’ಎಂದು ಹೇಳದೆ ‘ಉಳ್ಳೂರು ಮೂಕಾಂಬಿಕಾ’ ( ನಿಜವಾಗಿಯೂ ‘ವಾಗ್ದೇವಿ’ಎಂಬ ಕಾವ್ಯನಾಮಕ್ಕೆ ಅವರು ಅರ್ಹರು) ಎಂದು ಕರೆಯುವುದು ಸೂಕ್ತವೆಂದು ನನ್ನ ಪ್ರಾಮಾಣಿಕ ಅನ್ನಿಸಿಕೆ. ಸುರಗಂಗಾ, 28.02.2020 ಡಾ. ಪಾರ್ವತಿ ಜಿ.ಐತಾಳ್.