top of page

ಉತ್ತರ ಕನ್ನಡದಲ್ಲಿ ಪ್ರವಾಸೋದ್ಯಮ

ಉತ್ತರ ಕನ್ನಡದಲ್ಲಿ ಪ್ರವಾಸೋದ್ಯಮ ಬೆಳೆಸುವ ಕೆಲಸ ಆಗಲಿ *********************" ಉತ್ತರ ಕನ್ನಡದ ಪಂಚಕ್ಷೇತ್ರಗಳಲ್ಲೊಂದಾದ ಗುಣವಂತೆಯ ಶ್ರೀ ಶಂಭುಲಿಂಗೇಶ್ವರ ದೇವಾಲಯ ಹೊಸರೂಪ ಪಡೆದುಕೊಳ್ಳುವ ಸಿದ್ಧತೆ ಪ್ರಾರಂಭಿಸಿರುವುದು ಸಂತಸದ ಸಂಗತಿ. ಆರ್. ಎನ್. ಶೆಟ್ಟಿಯವರಿಂದಾಗಿ ಈಗಾಗಲೇ ಮುರ್ಡೇಶ್ವರ ಪ್ರಸಿದ್ಧ ಪ್ರವಾಸೀ ತಾಣವಾಗಿ ಅಭಿವೃದ್ಧಿ ಹೊಂದಿದೆ. ಅವರ ಮಕ್ಕಳೇ ( ಶ್ರೀ ಸತೀಶ ಮತ್ತು ಸುನೀಲ ಶೆಟ್ಟಿ) ಈಗ ಎರಡನೆಯದಾಗಿ ಗುಣವಂತೇಶ್ವರನ ಸನ್ನಿಧಿಗೆ ಬಂದಿದ್ದಾರೆ. ಮಂದಿರದ ಜೀರ್ಣೋದ್ಧಾರ ಕೆಲಸಕ್ಕೆ ಕೈಹಾಕಿದ್ದಾರೆ. ಅವರನ್ನು ಅಭಿನಂದಿಸಲೇಬೇಕು. ಇನ್ನುಳಿದ ಧಾರೇಶ್ವರ, ಸಜ್ಜೇಶ್ವರಗಳ ಅಭಿವೃದ್ಧಿ ಕಾರ್ಯ ಯಾರಿಂದ ನಡೆಯುತ್ತೋ ಗೊತ್ತಿಲ್ಲ. ಜಿಲ್ಲೆಯ ಸಿರಿವಂತರು , ಅದರಲ್ಲೂ ಆರ್. ವಿ. ದೇಶಪಾಂಡೆಯಂಥವರು ಈ ಬಗ್ಗೆ ಗಮನ ಹರಿಸಬಹುದು. ಗೋಕರ್ಣ ಪ್ರಸಿದ್ಧಿ‌ಪಡೆದಿದ್ದರೂ ಅಲ್ಲಿ ಪ್ರವಾಸೀ ಸೌಕರ್ಯಗಳ ಕೊರತೆ ಇದೆ. ಅದನ್ನು ಸರಿಪಡಿಸಬೇಕು. ಅದರಂತೆ, ಜಿಲ್ಲೆಯ ಏಕೈಕ ಸಚಿವರಾಗಿರುವ ಶ್ರೀ ಮಂಕಾಳು ವೈದ್ಯರು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಅವರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಸುವುದಕ್ಕೆ ಒಂದು ಯೋಜನೆ ರೂಪಿಸಿಕೊಂಡು ಸರಕಾರದಿಂದ ನೆರವು ಪಡೆದು ಅದು ಜಾರಿಯಾಗುವಂತೆ ನೋಡಿಕೊಂಡರೆ ಉತ್ತಮ. ಜಿಲ್ಲೆಯ ಪ್ರವಾಸೀ ಸ್ಥಳಗಳ ಒಂದು ಪ್ರವಾಸೀ ಜಾಲವನ್ನು ಸಿದ್ಧಪಡಿಸಿ ಜಿಲ್ಲೆ ಹೊರ ಜಿಲ್ಲೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಲಿ. ಇತರ ಎಂ. ಎಲ್ ಎ. ಗಳೂ ಅದಕ್ಕೆ ಸಹಕರಿಸಬೇಕು. ಅದು ಅವರ ಕರ್ತವ್ಯ. ಮುರ್ಡೇಶ್ವರ , ಗುಣವಂತೇಶ್ವರ, ಧಾರೇಶ್ವರ, ಗೋಕರ್ಣೇಶ್ವರ ಮತ್ತು ಸಜ್ಜೇಶ್ವರ ಈ ಪಂಚಕ್ಷೇತ್ರಗಳನ್ನೊಳಗೊಂಡಂತೆ ಜಿಲ್ಲೆಯ ಇತರ ಪ್ರವಾಸಿ ತಾಣಗಳಾದ ಬನವಾಸಿ, ಸಹಸ್ರಲಿಂಗ, ಮಾರಿಕಾಂಬಾ, ಅಪ್ಸರಕೊಂಡ, ಇಕೋಬೀಚ್, ಅಲ್ಲದೆ ಜಲಪಾತಗಳು ಎಲ್ಲವನ್ನೂ ತೋರಿಸುವ ಎರಡು ದಿವಸಗಳ ಬಸ್ ವ್ಯವಸ್ಥೆ ಮಾಡಿದರೆ ಉತ್ತಮ. ಮೊದಲು ಆಗಬೇಕಾದ್ದು ಈ ಸ್ಥಳಗಳ ಅಭಿವೃದ್ಧಿ ಮತ್ತು ಪ್ರವಾಸಿ ಸೌಕರ್ಯಗಳ ನಿರ್ಮಾಣ. ಇಷ್ಟು ವರ್ಷ ಜಿಲ್ಲೆ ಮಲಗಿದ್ದು ಸಾಕು. ಇನ್ನಾದರೂ ಜಿಲ್ಲೆಯ ಅಭಿವೃದ್ಧಿ ಕಡೆಗೆ ಜನಪ್ರತಿನಿಧಿಗಳು ಆಸಕ್ತಿ ವಹಿಸಲಿ. ಪ್ರವಾಸೋದ್ಯಮಕ್ಕೆ ಬೇಕಾದ ಎಲ್ಲ ಮೂಲವಸ್ತುಗಳೂ ಜಿಲ್ಲೆಯಲ್ಲಿವೆ. ಅವನ್ನು ಸರಿಪಡಿಸಬೇಕಷ್ಟೆ. - ಎಲ್. ಎಸ್. ಶಾಸ್ತ್ರಿ ಉತ್ತರ ಕನ್ನಡ ನಿಸರ್ಗ ಸುಂದರವಾದ ಜಿಲ್ಲೆ.ಕರ್ನಾಟಕದ ಕಾಶ್ಮೀರ ಎಂದೆ ಕರೆಯುವ ಜಿಲ್ಲೆ. ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ ಎಂದರು ಕವಿ ದಿನಕರ ದೇಸಾಯಿ. ಇಲ್ಲಿಯ ಜನ ಮತ್ತು ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ " ಒಡವೆಯಿದ್ದು ಬಡವೆ ಗಂಡ ಇದ್ದು ವಿಧವೆ" ಎಂಬ ಗಾದೆಯಂತಾಗಿದೆ ಇಲ್ಲಿಯ ಸಮಸ್ಯೆಗಳ ಪರಿಹಾರಕ್ಕೆ ಉತ್ತರ ಕಾಣದ ಉತ್ತರ ಕನ್ನಡ ಜಿಲ್ಲೆ ಆ ಕುರಿತು ಹಿರಿಯ ಬರಹಗಾರರು ಆದ ಚಿಂತಕರು ಆದ ಶ್ರೀ ಎಲ್.ಎಸ್.ಶಾಸ್ತ್ರಿಅವರ ಬರಹ ನಿಮ್ಮ ಓದಿಗಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ

ಉತ್ತರ ಕನ್ನಡದಲ್ಲಿ ಪ್ರವಾಸೋದ್ಯಮ
bottom of page