top of page
ಈ ..... ಬೆಳಕು!
ಆಗಷ್ಟೆ ಹಾಲಹಲ್ಲು ಉದುರಿ ರಕ್ತದ ಇಣುಕು ಒಸಡು ಸವರಿ ತುಡಿವ ಅಲ್ಪ ಬೇನೆಯಲು ಕಂದನ ಮಂದಹಾಸ ಬೆಳಕು ಕುಟ್ಟಣಿಯಲಿ ಕುಟ್ಟಿ ಹದವಾದ ತಾಂಬೂಲ ಜಗಿದು ಕರಿ-ಕೆಂಪಾದ ಬೊಚ್ಚು ಬಾಯಿ ಅಜ್ಜಿಯ ಸದರದ ಮುಗುಳುನಗೆ ಬೆಳಕು ಹತ್ತು ಪೈಸೆಗಾಗಿ ಕಾಯ್ದು ಕುಳಿತ ಗುಡಿಯ ಮುಂದಿನ ಭಿಕ್ಷು ಯಾರೋ ದಾನಿಯ ಹತ್ತು ರೂಪಾಯಿಗೆ ಹೊಮ್ಮಿ ಚಿಮ್ಮಿ ಹೊಳೆವ ನಗು ಬೆಳಕು ದಿನ ದಿನವೂ ದುಡಿದು ದಣಿದು ಒಂದಿಡೀ ಜೀವಮಾನದ ಬೆಳೆಗೆ ದುಗುಡದ ಗುಂಡಿಗೆ ಎದೆಯಲಿ ವರುಷತುಂಬ ಕಾಯ್ದು ಕಂಡ ದಿಕ್ಕು ದಿಕ್ಕು ಮೀರಿ ಬೆಳೆದು ನಿಂತ ಹಚ್ಚ ಹಸುರಿನ ಹೊನ್ನ ನಗೆಯ ದಟ್ಟ ಫಸಲಿನ ಬೆಳೆಯ ಬೆಳಕು ರಣಭೂಮಿಯಿಂದ ಬದುಕಿ ಬಂದು ಎಂದೂ ಕಂಡಿರದ ತನ್ನ ಹಸುಳೆಯ ಬಿಗಿದಪ್ಪಿದ ಸೈನಿಕನ ಮುಖದ ಹೊಳೆಯಾದ ಖುಷಿ...ಬೆಳಕು ಕೋವಿಡ್ ವಿಷಗಾಳಿ ಸಾಂಕ್ರಾಮಿಕ ನಿರ್ದಯ ಹಲ್ಲಲಿ ಕುಟುಕುಟುಕಿ ಇನ್ನೇನು ಮುಗಿವ ಆರ್ತದ ಸಮಯಕ್ಕೆ ಎದುರಾದ ವೈದ್ಯನ ಮುಗುಳುನಗೆಯ ಅಂತಃಕರಣ ಬೆಳಕು... ಈಗ... ಈ ಹೊಸ ಬೆಳಕು...! ಡಾ. ಅರಕಲಗೂಡು ನೀಲಕಂಠ ಮೂರ್ತಿ.
bottom of page