ಈ ಶಹರದ ಕಣ್ಣುಗಳಲ್ಲಿ...
ನೆತ್ತರು ಮೆತ್ತಿದ ಶಹರದ ಡಾಂಬರು ರಸ್ತೆಯ ಉನ್ಮಾದದ ತುದಿಗೆ ಹಸಿವ ತೃಷೆಗೆ ಕುಕ್ಕಡಿಸೋ ಗಿಡುಗಕ್ಕೆ ರಕ್ತ ಬಿಸಿಯಲ್ಲ ಸಿಹಿಯ ಮೃಷ್ಟಾನ್ನ ಶಹರದ ರಸ್ತೆಯ ಮೈದಡವಿದ ಬಸ್ಸು ಲಾರಿ ಕಾರಿನ ಓಘಕ್ಕೆ ಟೈರಿಗಂಟಿದ ರಕ್ತದ ಕಲೆ ಶಹರದ ಬೀದಿಯ ಸ್ನಾನಗೃಹ ಈ ಶಹರದ ಕಣ್ಣುಗಳಲ್ಲಿ ನಿಲುಕುವ ನಿಲುಕದ ನೋಟಗಳಲ್ಲಿ ಒಡೆದ ಕನ್ನಡಿಯ ಬಿಂಬ ಮತ್ತೇರುವ ಚೌಕಗಳಲ್ಲಿ ಮದಿರೆ,ನೀರೆಯರ ಝಳಕಿನಲ್ಲಿ ಶಹರದ ಸಂತೆಯಲ್ಲಿ ಬಿಕರಿಗಿಟ್ಟ ಕೆಂಗುಲಾಬಿ ಘಮಲುಗಳೆದುರು ಹಸಿಬಿಸಿಯುಸಿರಿನ ಚೌಕಾಸಿಗೆ ನಿಡುಸುಯ್ಯುವ ಅಗುಳಿನ ಕನಸು.
ಕಿವಿಯಾನಿಸಿ ಕೇಳುತ್ತಿದೆ ಶಹರ ಬಂಗಲೆ ಕಾಲಬುಡದಡಿಗೆ ಉಡುಗುವ ಕೊಳಗೇರಿಯ ಬಿರುಕು ಬಿಟ್ಟ ಗೋಡೆಗೆ ಖಾಲಿ ಮಡಿಕೆಯ ನಿತಂಬದ ನೀರವ ಸದ್ದಿಗೆ ನೊರೆಹಾಲಿಗಾಗಿ ಹಾತೊರೆವ ಚಿಗುರು ಪೈರಿನ ಕಲರವವ ಪಚ್ಚೆ ನೊಸಲಿನ ಶಹರ ಕಂಬನಿ ಮಿಡಿಯುತ್ತಿದೆ ಶಹರ ಕಣ್ಣಂಚು ಒದ್ದೆಯಾಗಿದೆ ಕುಳಿರ್ಗಾಳಿಯ ಕ್ರೋಧದುರಿಗೆ ನೆಲಸಮ ಚಾಳಗಳ ಕಣ್ಣೀರ ಕೊರಡುಗಳಿಗೆ ಎಳೆ ಮೊಗ್ಗು ಮಸಣದ ಮನೆಯಲ್ಲಿ ಯಾರದ್ದೋ ಪಾಪದ ಹೂವಾಗಿದ್ದಕ್ಕೆ ಮುನ್ನುಗ್ಗಿ ಮುಗ್ಗರಿಸುತಿದೆ ಶಹರ ಇತ್ತೀಚಿನ ದಿನಗಳಲ್ಲಿ ಈ ಶಹರದ ಕಣ್ಣುಗಳಲ್ಲಿ ಮತ್ತಿನ್ನೇನೋ ಕದಡಿದ ಬಿಂಬ ಕಾಣಲಿಕ್ಕಿದೆಯೋ! ಮಾಯಗನ್ನಡಿಯಲ್ಲಿ.. ಮಂಜುನಾಥ ನಾಯ್ಕ ಯಲ್ವಡಿಕವೂರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಯಲ್ವಡಿ ಕವುರಿನ ಮಂಜುನಾಥ ನಾಯ್ಕ ವೃತ್ತಿಯಲ್ಲಿ ಆರಕ್ಷಕರು .ಪ್ರವೃತ್ತಿಯಲ್ಲಿ ಸಾಹಿತ್ಯೋಪಾಸಕರು. ಅವರ ಕವಿತೆಗಳು ಹೊಸತನದ ಹಂಬಲದಿಂದ ತಂಬಿಕೊಂಡು,ಭಾವ ಸೂಕ್ಷ್ಮಗಳಿಂದ,ಲಯ ಲಾಲಿತ್ಯದಿಂದ ಓದುಗರ ಮನವನ್ನು ಮುಟ್ಟುವಲ್ಲಿ ಸಫಲವಾಗುತ್ವವೆ.ಮಂಜುನಾಥ ಅವರ ಕವಿತೆಗಳಿಗೆ ಹಲವು ಅರ್ಥಸಾಧ್ಯತೆಗಳ ಕವುರುಗಳಿವೆ.ಕವಿ,ಕತೆಗಾರ,ಮಾನವ್ಯದ ಪ್ರೀತಿಯ ಹರಿಕಾರ ಮಂಜುನಾಥ ನಮ್ಮ ನಡುವಿನ ಭರವಸೆಯ ಕವಿ ಇವರ ಅಂಜುಬುರುಕಿಯ ರಂಗವಲ್ಲಿ ಕವನ ಸಂಕಲನ ಸದ್ಯದಲ್ಲಿ ಪ್ರಕಟವಾಗಲಿದೆ