top of page

ಇಬ್ರಾಹಿಂ

ಇಬ್ರಾಹಿಂ ದೇವರೊಂದಿಗೆ ಮೂರೂ ದಿನಗಳ ಕಾಲ ಇದ್ದ ಸೌಭಾಗ್ಯ ನನ್ನದು. 2010ರಲ್ಲಿ ಮೈಸೂರಿನ ಉತ್ತನ ಹಳ್ಳಿಯಲ್ಲಿರುವ ವಕೀಲ ಮಿತ್ರ ವೇಣು ಗೋಪಾಲ್ ಅವರ ಓಶೋ ಆಶ್ರಮಕ್ಕೆ ಬಂದಿದ್ದರು. ರಜನೀಶ್ ಆಶ್ರಮದ ಪದ್ಧತಿಯಂತೆ ಸಂಕೋಚ ಬಿಟ್ಟು ಸಂಗೀತ ಅಲೆಯಲ್ಲಿ ನೃತ್ಯ ಮಾಡಬೇಕು . ಜೊತೆಗೆ ಯೋಗ ಧ್ಯಾನ ನಿರಂತರವಾಗಿರುತ್ತಿತ್ತು. ಇಂತಹ ವಾತಾವರಣದಲ್ಲಿ ಇಬ್ರಾಹಿಂ ಅವರು ಯಾವ ಮುಜುಗರ, ತಾವೊಬ್ಬ ಘನ ವಿದ್ವಾಂಸ ಎಂಬ ಹಮ್ಮು ಬಿಮ್ಮು ಇಲ್ಲದೆ, ನನ್ನಂಥ ಸಾಧಾರಣ ವ್ಯಕ್ತಿತ್ವದ, ಕಿರಿ ವಯಸ್ಸಿನವರೊಂದಿಗೆ ಸಮೂಹ ನೃತ್ಯ ಮಾಡುತ್ತಿದ್ದರು. ಇವರು ಅಲ್ಲಿಗೆ ಬಂದದ್ದು, ಪ್ರಯೋಗಾತ್ಮಕ ದೃಷ್ಟಿಕೋನದಿಂದ, ನಾನು ಇವರ ಹಿನ್ನೆಲೆ ಗೊತ್ತಿಲ್ಲದೆ, "ಯಾರಪ್ಪ ಇದು ಮುಸ್ಲಿಂ ವೃದ್ಧ ಓಶೋ ಕ್ಯಾಂಪ್ ಗೆ ಬಂದಿದ್ದಾರೆ ಅಂತ ಅಚ್ಚರಿ ಆಗಿತ್ತು. ಆಗ ವಕೀಲ ಮಿತ್ರರಾದ ವೇಣುಗೋಪಾಲ್ "ಇವರು ಬಾಗಲಕೋಟೆ ಇಬ್ರಾಹಿಂ. ಕನ್ನಡದ ಕಬೀರ, ಭಾವೈಕ್ಯತೆ ಸಾಕಾರ ಮೂರ್ತಿ ಅಂತ ನನಗೆ ಪರಿಚಯ ಮಾಡಿಕೊಟ್ಟಾಗ ಅವರೆಗೂ ನನ್ನಲ್ಲಿದ್ದ ಅವರ ಮೇಲಿನ ಬಾಲಿಶ ಕಲ್ಪನೆಗಳು ಜರ್ರನೆ ಇಳಿದು, ನನ್ನ ಬಗ್ಗೆ ನನಗೆ ನಾಚಿಕೆಯಾಗಿತ್ತು. ಅಂದು ಬಾಗಲಕೋಟೆ ಇಬ್ರಾಹಿಂರೊಂದಿಗೆ ಹೆಚ್ಚು ಮಾತಾಡಲು ಸಾಧ್ಯವಾಗದಿದ್ದರೂ, ಅವರ ಮೊಬೈಲ್ ನಂಬರ್ ಪಡೆದಿದ್ದು ಬಹಳ ಅನುಕೂಲವಾಯಿತು. ಕಸ್ತೂರಿ ಟಿವಿ ಚಾನೆಲ್ ನಲ್ಲಿ ಇವರದೊಂದು ನಿತ್ಯ ಮುಂಜಾನೆ ಉಪದೇಶಾಮೃತ ಕಾರ್ಯಕ್ರಮ ಆಯೋಜಿಸುವ ನನ್ನ ಪ್ರಯತ್ನ ಫಲಿಸಲಿಲ್ಲ. ಟಿವಿ ಮಾಧ್ಯಮಗಳು ಇಂತಹ ಭಾವೈಕ್ಯಕಾರರನ್ನು ಹೆಚ್ಚಾಗಿ ಬಳಸಿಕೊಳ್ಳಲಿಲ್ಲ. ಇವರ ಪ್ರವಚನ ಹೆಚ್ಚಾಗಿ ಬಳಸಿಕೊಂಡಿದ್ದರೆ ಈಗ ರಾಜ್ಯದಲ್ಲಿ ಕಾಣುತ್ತಿರುವ ಧರ್ಮದ ವಿಕೃತಿಗಳು ಕಡಿಮೆಯಾಗುತ್ತಿದ್ದವು. ಅದರಲ್ಲೂ ಹಿಜಬ್ ಗಜಬ್ ಆಗುತ್ತಿರುವಂಥ ಕಾಲದಲ್ಲಿ, ಇಬ್ರಾಹಿಂ ಅವರ ಮಾರ್ಗದರ್ಶನ ಅತ್ಯವಶ್ಯವಾಗಿ ಬೇಕಿತ್ತು. ಇಂತಹ ಸಂಧಿಗ್ದ ಕಾಲದಲ್ಲಿ ಇಬ್ರಾಹಿಂ ರಂಥ ಸಂತರು ನಮ್ಮಿಂದ ದೂರವಾಗಿದ್ಫು ಕರ್ನಾಟಕಕ್ಕೆ ತುಂಬಲಾರದ ನಷ್ಟ. ಇಂತಹ ಮಾನವಂತರು-ಮಾನ್ಯವಂತರು ಕಳೆದುಕೊಂಡು ಕನ್ನಡ ನಾಡು ಅಕ್ಷರಶಃ ಅನಾಥವಾಗಿದೆ. ಮತಾಂಧತೆ ರೌದ್ರತೆ ನೋಡುತ್ತಲೇ, ನಿಸ್ಸಹಾಯಕರಾಗಿ ಇಬ್ರಾಹಿಂ ದೂರ ಸಾಗಿ, ನೆಮ್ಮದಿ ತಾಣ ಸೇರಿದ್ದಾರೆ. ನಾವು ಪಾಪಿಗಳು, ಇನ್ನೂ ನಾವು ಪಾಪಾತ್ಮರ ಕೋಮುವಾದ ಡೋಂಗಿ ವಾದ ನೋಡಿಕೊಂಡು ಕೇಳಿಕೊಂಡು ಸಂಕಟ ಅನುಭವಿಸುತ್ತಾ ಸಾಯಬೇಕಿದೆ. ಹೋಗಿ ಬನ್ನಿ ಇಬ್ರಾಹಿಂ ಸಾಹೇಬರೇ, ನಿಮ್ಮ ಅತ್ಮ ಪರಮಾತ್ಮನಲ್ಲಿ ಐಕ್ಯವಾಗಲಿ, ಆ ಪರಮಾತ್ಮನಿಗೊಂದು ಮನವಿ ಕೊಡಿ, "ಈ ದೇಶದ ಜನರಿಗೆ ಒಂದಿಷ್ಟು ಸದ್ಭುದ್ದಿ ಕೊಟ್ಟು, ಕಾಪಾಡು, ಜಾತಿ ಧರ್ಮದ ಮೋಹದಲ್ಲಿ ಬೇಯುತ್ತಿರುವ ಮನಸ್ಸುಗಳಿಗೆ ಜಾತ್ಯತೀತ ನೀರನ್ನೇರೆದು ಸಾಂತ್ವನ ನೀಡು " ಅಂತ... 🙏🙏🙏 ಪ್ರಕಾಶ ಬಾಬು ಮೈಸೂರು

ಇಬ್ರಾಹಿಂ
bottom of page