ಆಸ್ತಿಯ ಹಕ್ಕು ಮತ್ತು ಹೆಣ್ಣು ಮಗಳ ಅಸ್ಮಿತೆ
ತಲಾತಲಾಂತರದಿಂದಲೂ ಹೆಣ್ಣನ್ನು ತನ್ನ ಉದ್ದೇಶಗಳಿಗೆ ನೇಮಿಸಿಕೊಳ್ಳುವ ಮನಸ್ಥಿತಿ ಇರುವ ಪುರುಷಷಾಹಿ ಮನಸ್ಥಿತಿಗಳು, ಇಷ್ಟು ವ್ಯವಸ್ಥೆ ಯಲ್ಲೇ ಹೆಣ್ಣು ಇರಬೇಕು ಎನ್ನುವ ಧೋರಣೆಗಳು ಇಂದಿಗೂ ಜನಜನಿತವಾಗಿದೆ. ಈ ಪುರುಷಷಾಹಿ ಮನಸ್ಥಿತಿ ಹೊಂದಿದವರು ಪುರುಷರೇ ಆಗಬೇಕೆಂದಿಲ್ಲ. ಲಿಂಗದ ಹಂಗಿಲ್ಲದೆ, ವಯೋಮಾನ ಬೇಧವಿಲ್ಲದೆ, ಯಾರೂ ಬೇಕಾದರೂ ಆಗಿರಬಹುದು. ಇಂದು ಇಂದಿನ ಸಮಸ್ಯೆಯೂ ಅಲ್ಲ. ಎಲ್ಲಾ ಕಾಲದಲ್ಲಿಯೂ ಹೆಣ್ಣಿನ ಹಕ್ಕು, ಹಡೆಯುವ ಧರ್ಮಕ್ಕೆ ಧರ್ಮ, ನೀತಿ, ಸಂಸ್ಕಾರ, ಆಚಾರ, ವಿಚಾರಗಳ ಹೆಸರಿನಲ್ಲಿ ಭಯಂಕರ ಅಸಮಾನಯೆಗಳನ್ನು ಸ್ತ್ರೀಯರು ಅನುಭವಿಸುತ್ತಲೇ ಬಂದಿದ್ದಾರೆ. ಇಂತಹ ಗತಿಸ್ಥಿತಿಯ ಕಾರಣ ಸನ್ನಿ ಹಿಡಿದ ಸಮಾಜದ ಕೆಲವು ಸದಸ್ಯರೇ. ಇಂದು ಸುಪ್ರೀಂಕೋರ್ಟ್ ಮಗಳ ಹಕ್ಕು,ಅಸ್ಮಿತೆಯನ್ನು ಒಕ್ಕೊರಲಿನಿಂದ ಎತ್ತಿ ಹಿಡಿದಿದೆ. ಹುಟ್ಟಿದ ಮನೆಯಲ್ಲಿ ಸ್ಥಾನ, ಮಾನವನ್ನು ಯಾರೂ ಕೊಡುವುದಲ್ಲ, ಅದು ಮಗಳ ಹಕ್ಕು ಎಂದು ಎತ್ತಿಹಿಡಿದಿದೆ. ಇಂಥಹ ಇತಿಹಾಸ ನಿರ್ಮಿಸಿದ ತೀರ್ಪುಗಳು ನಮ್ಮ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ ನಮ್ಮಗಳ ಸುಕೃತ. ಕಾಲಕ್ರಮೇಣ ಎಷ್ಟೇ ಬದಲಾವಣೆ ಹೊಂದಿದರು ಸಹ "ಮಗ ಮದುವೆಯಾಗುವ ತನಕ ಮಗನಾಗಿ ಇರುತ್ತಾನೆ, ಮಗಳು ಕೊನೆಯತನಕ ಮಗಳಾಗಿಯೇ ಇರುತ್ತಾಳೆ" ಎನ್ನುವ ಘಂಟಾಘೋಷ ಕೇವಲ ತೀರ್ಪಲ್ಲ. ಬದಲಿಗೆ ಅದು ಕೋಟ್ಯಂತರ ಹೆಣ್ಣು ಮಕ್ಕಳಿಗೆ ನೀಡಿರುವ ಧ್ಯೆರ್ಯ ಕೂಡಾ. ಅದೆಷ್ಟು ಲಕ್ಷ ಹೆಣ್ಣು ಮಕ್ಕಳು ಚಿಕ್ಕ ಪ್ರಾಯದಲ್ಲೇ ಮದುವೆಯಾಗಿ, ಮಕ್ಕಳಾಗಿ ಬದುಕಿನ ಅನಿಶ್ಚಿತತೆ ಗಳಿಗೆ ಬೆದರಿ ತಮ್ಮನ್ನು ಕೊಂದು, ಮಕ್ಕಳನ್ನು ಕೊಂದು ಇಲ್ಲವಾಗಿ ಹೋಗಿಲ್ಲ ಹೇಳಿ. ಪ್ರತಿನಿತ್ಯ ಪತ್ರಿಕೆಗಳಲ್ಲಿ ಇಂಥ ಧಾರುಣ ಸಾವುಗಳಿಗೆ ಕಣ್ಣೀರು ಹಾಕಲು ಯಾರೂ ಸಿದ್ದರಿರುವುದಿಲ್ಲ. ಪೋಲೀಸ್ ಇಲಾಖೆಯೇ ಅದೆಷ್ಟೋ ಇಂಥಾ ಅನಾಥ ಹೆಣಗಳನ್ನು ದಫನ್ ಮಾಡಿಲ್ಲ ಹೇಳಿ. ಚಿಕ್ಕ ಪ್ರಾಯಕ್ಕೆ ಪ್ರೀತಿ ಪ್ರೇಮ ಪ್ರಣಯ ಎಂದೆಲ್ಲಾ ದಾರಿ ತಪ್ಪಿ, ಗಂಡನನ್ನು ನಂಬಿ ನಗರಗಳಿಗೆ ಬದುಕು ಕಟ್ಟುಕೊಳ್ಳಲು ಬರುವ ನೂರಾರು ಸಾವಿರಾರು ಹೆಣ್ಣುಮಕ್ಕಳಿಗೆ ಸಿಗುವುದಾದರೂ ಏನು? ಕುಡಿತದ ಚಟಕ್ಕೆ ಬೀಳುವ ಗಂಡ, ಕೆಲವು ಕಾಮ ಪಿಶಾಚಿಗಳ ಬಾಯಿಗೆ ತುತ್ತಾಗುವ ಗಂಡ, ಕಡೆಗೆ ಮನೆಯಲ್ಲಿ ಮಕ್ಕಳಿಗೆ ಊಟ, ವಸತಿಗೂ ಹಣ ಹೊಂದಿಸಲಾಗದೆ ದುಡಿಮೆಗೆ ನಿಂತರೂ ಸರಿಯಾದ ನೆಲೆಕಾಣದ ಸಂಸಾರ. ಸಂಸಾರ ಹಳಿತಪ್ಪಿದಾಗ ತಿದ್ದಿ ಬುದ್ದಿ ಹೇಳಿದರೆ ಖಂಡಿತವಾಗಿ ಗಂಡೂ- ಹೆಣ್ಣು ಬದಲಾಗಿ ತಮ್ಮ ಮಕ್ಕಳಿಗಾಗಿಯೇ ಸಮಾಜದಲ್ಲಿ ಗೌರವದಿಂದ ಬದುಕಬೇಕೆಂಬ ಮನೋಭಾವ ತಾಳುವರು. ಆದರೆ, ತಿದ್ದಲು ತಂದೆ ಮನೆಯವರು, ಅತ್ತೆಯ ಮನೆಯವರು ಯಾರೂ ಬರಲು ಸಿದ್ದವಿಲ್ಲ. ಕೆಲವು ಕುಟುಂಬಕ್ಕೆ ಗೌರವ ಹತ್ಯೆ ಮಾಡುವ ಕೀಚಕ ಪ್ರವೃತ್ತಿ, ಮತ್ತೆ ಕೆಲವರಿಗೆ ಜವಾಬ್ದಾರಿ ಕಳೆಯಿತು, ಹಣವೂ ಉಳಿಯಿತು, ಹೇಗಾದರೂ ಹಾಳಾಗಲಿ, ನಮಗೆ ಹುಟ್ಟೇ ಇಲ್ಲ ಎನ್ನುವ ಅಸಹಜ ವಿಕೃತ ಮನೋಭಾವ. ಇಂಥಹ ಪರಮ ಅಸಹಜ ತಾರತಮ್ಯವನ್ನು ನಮ್ಮ ದೇಶದ ನ್ಯಾಯ ಸ್ತಂಭ ಒಂದೇ ಭಾರಿಗೆ ಅಳಿಸಿ ಹಾಕಿದೆ. ಈ ಬಹುದೊಡ್ಡ ಇತಿಹಾಸ ನಿರಮಿತ ತೀರ್ಪಿಗೆ ಸಮಾಜದಿಂದ ದೊಡ್ಡ ಚಪ್ಪಾಳೆ ಮೂಲಕ ಕರಿಕೋಟು ಧರಿಸಿ ನ್ಯಾಯ ದರ್ಶನಕ್ಕೆ ದುಡಿಯುವ ವರ್ಗವನ್ನು ಗೌರಿವಿಸೋಣ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ, ಕುಂಭದ ಮೇಲೆ ಕೂಳು ಹಾಕುವ ಮಗನಿಗೆ ಆಸ್ತಿ ದಕ್ಕಬೇಕು ಎನ್ನುವ ಪುರಾಣಗಳ ಧೋರಣೆಗಳು ತಂತಾನೆ ತಿದ್ದಲಿ. ಸಮಾಜದಲ್ಲಿ ಮಹಿಳೆಯರ ಮೇಲೆ ದಾಳಿ, ಅತ್ಯಾಚಾರ, ಅನಾಚಾರ, ಹಿಂಸೆ, ಕೊಲೆ ಏನೇ ನಡೆದರೂ ನ್ಯಾಯ ದೇವತೆ ಅದನ್ನು ಸುಮ್ಮನೆ ಕಣ್ಣು ಮುಚ್ಚಿ ತಡೆದಿದ್ದಾಳೆ ಎನ್ನುವ ದಡ್ಡ ತಿಳುವಳಿಕೆ ಇನ್ನಾದರೂ ಮಂಕುದಿಣ್ಣೆಗಳು ದೂರಮಾಡಲಿ. ನಮಗಾಗಿ ನ್ಯಾಯ ದೇವತೆ ಸದಾಕಾಲವೂ ಇರುತ್ತಾಳೆ. ನೊಂದವರಿಗೆ ನ್ಯಾಯವಿದೆ ಎನ್ನುವ ಮಾತು ಸತ್ಯವಾಗಿದೆ =000=
ಪ್ರತಿಭಾವಂತ ಲೇಖಕಿ ಶ್ರೀಮತಿ ನಳಿನ ಡಿ ಇವರು ಹವ್ಯಾಸಿ ಪತ್ರಕರ್ತೆ , ನಾಟಕಕಾರ್ತಿ , ಕವಿಯಿತ್ರಿ , ಅಂಕಣಗಾರ್ತಿ , ಸಂಶೋಧಕಿ ಹೀಗೆ ಬಹುಮುಖ ವ್ಯಕ್ತಿತ್ವ ಹೊದಿದ್ದಾರೆ. ಈಗಾಗಲೇ ಸುಮಾರು 15 ಕ್ಕೂ ಹೆಚ್ಚಿನ ಗ್ರಂಥಗಳನ್ನು ರಚಿಸಿರುವ ಇವರು ಕತೆ,ಕವನ, ನಾಟಕ, ಕಾದಂಬರಿ ಹೀಗೆ ಸಾಹಿತ್ಯ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಕೃಷಿ ಮಾಡಿದ್ದಾರೆ . ಪ್ರಸ್ತುತ ಚಿಕ್ಕಮಗಳೂರು ಕುರಿತು ಸಮಗ್ರ ಮಾಹಿತಿ ಅಧ್ಯಯನ ಕೈಗೊಂಡಿದ್ದಾರೆ - ಸಂಪಾದಕ