ಆಲೋಚನೀಯ-೩೨.
ಕಾಲವನ್ನು ಪ್ರವಾಹಕ್ಕೆ ಹೋಲಿಸುತ್ತಾರೆ.ಪ್ರವಾಹ ಹೇಗೆ ನಿಲ್ಲದೆ ನಿರಂತರ ಚಲನಶೀಲವಾಗಿರುದೊ ಹಾಗೆ ಕಾಲವೂ ಸಹ.ಬದುಕಲು ಪ್ರಾಣವಾಯು ಹಾಗೆ ಕಾಲವೂ ಸಹ.ಕಾಲ ಬದಲಾಗುತ್ತದೆ.ಕಾಲಕ್ಕೆ ತಕ್ಕಂತೆ ಮನುಷ್ಯನು ಬದಲಾಗುತ್ತಾನೆ.ಮಹಾತ್ಮಾ ಗಾಂಧೀಜಿ,ಗುರುದೇವ ಟಾಗೋರ,ಲಾಲ ಬಹಾದ್ದೂರ ಶಾಸ್ತ್ರಿ,ದಿನಕರ ದೇಸಾಯಿ,ಶಾಂತವೇರಿ ಗೋಪಾಲ ಗೌಡ,ಹೊನ್ನಾವರದ ಡಾ.ವಿ.ಕೆ.ಬಿ.ಬಳಕೂರ,ಪತ್ರಿಕೋದ್ಯಮಿ ಪಾಂಡೇಶ್ವರ ಗಣಪತಿ ರಾಯರು,ಕೋಟ ಶಿವರಾಮ ಕಾರಂತ,ಅಮೃತಾ ಪ್ರೀತಂ ಇಂಥವರು ಕಾಲ ಪ್ರವಾಹದಲ್ಲಿ ಕೊಚ್ಚಿ ಹೋಗದೆ ಬಂಡೆಯಂತೆ ಗಟ್ಟಿಯಾಗಿ ನಿಂತವರು.ಅಂಥವರ ಸಂಖ್ಯೆ ಈಗ ವಿರಳವಾಗಿದೆ.ಹಣ ಮಾಡುವ ರೋಗ ಬಹಳಷ್ಟು ಜನರನ್ನು ಬಿಡದೆ ಬಾಧಿಸುತ್ತಿದೆ.ಹಣದ ಮುಂದೆ ಅವರಿಗೆ ಇನ್ನೇನು ಕಾಣುತ್ತಿಲ್ಲ.ಸಾಹಿತ್ಯ ಸಂಗೀತ,ಜೀವನ ಪ್ರೀತಿ ಇವೆಲ್ಲ ಅವರಿಗೆ ಗೌಣವಾಗಿ ಕಾಣುತ್ತದೆ.ಹಣಕ್ಕಿಂತ ಮಿಗಿಲಾದದ್ದು ಜೀವನದಲ್ಲಿಯೆ ಕಾಣುವ ಆನಂದ.ಆನಂದಮಯ ಈ ಜಗ ಹೃದಯ ಎಂಬ ಕವಿ ಕುವೆಂಪು ವಾಣಿಯನ್ನು ನಾವು ಆಗಾಗ ಮೆಲುಕು ಹಾಕುತ್ತಿರ ಬೇಕು. ಅಧಿಕಾರದ ಗದ್ದುಗೆಯಲ್ಲಿ ಕುಳಿತವರಿಗೆ ಸದ್ಯದ ಸಂದರ್ಭದಲ್ಲಿ ಮರಿಚಿಕೆಯಾಗಿದೆ.ಒಂದು ಸಮಸ್ಯೆ ಬಗೆ ಹರಿಯಿತು ಎನ್ನುವಷ್ಟರಲ್ಲಿ ಇನ್ನೊಂದು ಹುಟ್ಟಿಕೊಳ್ಳುತ್ತದೆ.ಅತೃಪ್ತರು ಸದಾಕಾಲ ಸರಕಾರದ ಪತನವನ್ನೆ ಬಯಸುತ್ತಾರೆ.ಮುಖ್ಯಮಂತ್ರಗಳಿಗೆ ನಿದ್ದೆ ಮಾಡಲು ಬಿಡುತ್ತಿಲ್ಲ.ಪಂಚಮಸಾಲಿ ಸಮುದಾಯಕ್ಕೆ,2ಎ,ಕುರುಬ ಸಮುದಾಯಕ್ಕೆ ಎಸ್.ಟಿ.ಮೀಸಲಾತಿ,ನಾಯಕ ಜನಾಂಗದವರು ಎಸ್.ಟಿ.ಮೀಸಲಾತಿಯಲ್ಲಿ 3 ರಿಂದ 7.5. ಪ್ರತಿಶತ ಮೀಸಲಾತಿ ಕೇಳುತ್ತಿದ್ದಾರೆ.ಒಂದು ಸಮುದಾಯದ ಹಿರಿಯರೊಬ್ನರು ಬೆಂಕಿ ಹಚ್ಚಿವ ಮಾತನ್ನು ಗಟ್ಟಿಯಾಗಿ ಹೇಳಿದ್ದನ್ನು ಎಲ್ಲರೂ ಕೇಳಿಸಿಕೊಂಡಿದ್ದಾರೆ.ಇದು ಸಮಾಜಕ್ಕೆ ಹಿತಕಾರಿಯಾದ ಮಾತಂತು ಅಲ್ಲ.ಈ ಬಗೆಯ ಆವೇಶ,ಅಬ್ಬರ,ಪಾದಯಾತ್ರೆ ,ಪತ್ರಿಕಾಗೋಷ್ಠಿ ಎಲ್ಲವು ಒಮ್ಮೆಲೆ ಮುನ್ನಲೆಗೆ ಬಂದಿವೆ. ಉದ್ಯೋಗವಿಲ್ಲದೆ ಖಾಲಿ ಇದ್ದವರನ್ನು ಬಳಸಿಕೊಳ್ಳುವ ಪ್ರಯತ್ನ ನಡೆಯ ಬೇಕಾಗಿದೆ.ಅಂತವರಿಗೆ ಸವಲತ್ತುಗಳನ್ನು ಕೊಡ ಬೇಕು.ಅವರು ಮುಂಚೂಣಿಗೆ ಬಂದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳ ಬೇಕಾದ ಅನಿವಾರ್ಯತೆ ಇದೆ ಎಂದು ಬಿಂಬಿಸತ್ತಿದ್ದಾರೆ.ಮೀಸಲಾತಿಯ ಅತಿ ಹೆಚ್ಚು ಪ್ರಯೋಜನ ಪಡದವರು ಮತ್ತೆ ಚಳುವಳಿಗೆ ಸಜ್ಜಾಗುತ್ತಿದ್ದಾರೆ.ಅವರಿಗೆ ಮೀಸಲಾತಿಯ ಪ್ರಯೋಜನದ ರುಚಿ ಹತ್ತಿ ಮತ್ತಿಷ್ಟು ಬೇಕು ಎನ್ನುತ್ತಿದ್ದಾರೆ.ಆದರೆ ಮೀಸಲಾತಿ ಎಂದರೆ ಏನು ಎಂದು ಅರಿಯದ ಆದರೆ ಮೀಸಲಾತಿಯ ಪಟ್ಟಿಯಲ್ಲಿರುವ ಹಲವು ಸಮುದಾಯಗಳು ಅರ್ಹತೆಗೆ ತಕ್ಕಷ್ಟು ಶಿಕ್ಷಣವನ್ನು ಪಡೆಯದೆ ಮಬ್ಬಿನಲ್ಲಿದ್ದಾರೆ. " ಜಿಸಕಿ ಲಾಟಿ ಉಸಕಿ ಭೈಂಸ" ಎಂಬ ಮಾತೊಂದು ಹಿಂದಿಯಲ್ಲಿದೆ.ಯಾರ ದೊಣ್ಣೆಯೊ ಅವರದೆ ಎಮ್ಮೆ ಎಂದು ಅದರ ಅರ್ಥ. ನಾವು ಕೇಳಿದ ಮೀಸಲಾತಿ ಸಿಗದೆ ಇದ್ದರೆ ಬೆಂಕಿ ಹಚ್ಚುತ್ತೇವೆ ಎಂದು ಅಬ್ಬರಿಸಿ ಬೊಬ್ಬಿರಿವವರು, ಆಮರಣಾಂತ ಉಪವಾಸ ಮಾಡುತ್ತೇವೆ ಎನ್ನುವವರು,ವಿಧಾನಸೌಧಕ್ಕೆ ಮುತ್ತಿಗೆ ಹಾಕುವವರು ಒಟ್ಟಾಗಿ ಅರಾಜಕತೆಯನ್ನು ಹುಟ್ಟು ಹಾಕುತ್ತಿದ್ದಾರೆ. 'ಬೆಂಕಿಯನ್ನು ಬಿತ್ತಿದವ ಬೂದಿಯನ್ನು ಬೆಳೆಯುತ್ತಾನೆ' ಎಂಬ ಗಾದೆಯಮಾತು ನೆನಪಾಗುತ್ತಿದೆ. ಮಹಾಕವಿ ಪಂಪ ಹೇಳಿದ ಮಾತು "ಮನುಷ್ಯಜಾತಿ ತಾನೊಂದೆ ವಲಂ' ಎಂಬ ಮಾತು ಮರವೆಯಾಗದಂತೆ ಎಚ್ಚರವಹಿಸ ಬೇಕಾಗಿದೆ.ಯಾಕೆಂದರೆ ನಾವು ಮನುಷ್ಯರು. ಡಾ.ಶ್ರೀಪಾದ ಶೆಟ್ಟಿ.