top of page

ಆಲೋಚನೀಯ-೨೫

ರೈತರು ದಿಲ್ಲಿಗೆ ದೌಡಾಯಿಸಿದ್ದಾರೆ.ತಮ್ಮ ಹೊಲ ಗದ್ದೆಗಳಲ್ಲಿ ಕೃಷಿ ಕಾಯಕದಲ್ಲಿ ತೊಡಗಿದ್ದ ರೈತರು ಕೇಂದ್ರ ಸರ್ಕಾರ ರೈತರ ಉತ್ಪನ್ನಗಳಿಗೆ,ಅವರ ಹಿತಾಸಕ್ತಿಗೆ ಸಂಬಂಧಿಸಿ ಮಾಡಿದ ಕಾನೂನನ್ನು ವಿರೋಧಿಸಲು ಚಳುವಳಿಯ ಮಾರ್ಗವನ್ನು ಹಿಡಿದಿದ್ದಾರೆ.ಅಹಿಂಸಾತ್ಮಕ ನೆಲೆಯಲ್ಲಿ ಅವರು ನಡೆಸುತ್ತಿರುವ ಹೋರಾಟ ದೆಹಲಿಯ ಆಳರಸರಲ್ಲಿ ತಣ್ಣಗಿನ ನಡುಕವನ್ನು ಹುಟ್ಟಿಸಿದ್ದು ನಿಜ.ತಮಗೆ ಇದೆಲ್ಲಾ ತಾಗುವುದಿಲ್ಲ,ತಟ್ಟುವುದಿಲ್ಲ ಎಂದು ಮಾತಿನ ಮಂಟಪ ಕಟ್ಟುವವರು ತಮ್ಮ ಎದೆಯನ್ನು ಮುಟ್ಟಿ ನೋಡಿಕೊಳ್ಳುವ ಸಂದರ್ಭ ಸೃಷ್ಟಿಯಾಗಿದೆ. ತಾವು ಮಾಡಿದ್ದನ್ನೆಲ್ಲಾ ರೈತರು ಒಪ್ಪಿಕೊಳ್ಳ ಬೇಕು.ನಾವಿರುವುದೆ ರೈತರ ಹಿತವನ್ನು ಕಾಪಾಡಲಿಕ್ಕೆ ಎಂದು ಬಿಂಬಿಸ ಹೊರಟವರ ಸಾಚಾತನ ಬಯಲಾಗಿದೆ.ಆಳುವವರ ನಗುವನ್ನು ಮೀರಿಸಿ ಅವರ ಕೋರೆ ದಾಡೆಗಳನ್ನು ಎಲ್ಲರು ಕಂಡಿದ್ದಾರೆ.ರೈತರ ದೆಹಲಿ ಪ್ರವೇಶವನ್ನು ತಡೆಯಲು ರಸ್ತೆಯಲ್ಲಿ ಕಂದಕ ತೋಡಿದರು,ಜಲ ಫಿರಂಗಿಗಳನ್ನು ಪ್ರಯೋಗಿಸಿದರು,ಪೋಲಿಸರಿಂದ ಕಿರುಕುಳ ನೀಡಿದರು.ಆದರೆ ಇದರಿಂದ ಧೃತಿಗೆಡದ ರೈತರು ಮುಂದೆ ಸಾಗಿದರು.ಅಡ್ಡಿ ಮಾಡಿದ ಪೋಲಿಸರಿಗೆ ಉಣ ಬಡಿಸಿದರು.ಹಿಂಸೆಯತ್ತ ವಾಲದಂತೆ ಎಚ್ಚರ ವಹಿಸಿದರು.ಈಗ ಸುಪ್ರೀಂ ಕೋರ್ಟಿಗೆ ಹೋಗಲು ಸಿದ್ಧತೆ ನಡೆಸಿದ್ದಾರೆ.ಈ ವರೆಗೆ ನಡೆದ ಹೋರಾಟಕ್ಕಿಂತ ಇದು ಭಿನ್ನವಾಗಿದೆ.ಸರಕಾರ ತನ್ನ ಕಾನೂನಿನ ಹಗ್ಗವನ್ನು ಸಡಿಲಗೊಳಿಸಿ ಮಾತುಕತೆಗೆ ರೈತರನ್ನು ಕರೆಯುವ ಪ್ರಯತ್ನ ನಡೆಸಿದೆ.ಆದರೆ ಇದು ಅಷ್ಟು ಸುಲಭವಾಗಿ ಮುಗಿಯುವಂತೆ ಕಾಣುತ್ತಿಲ್ಲ. ಮಾತಿನಲ್ಲಿ ಹುಗ್ಗಿ ಹೋಳಿಗೆಯ ಊಟ ಬಡಿಸಿ,ಮೂಗಿಗೆ ತುಪ್ಪ ಹಚ್ಚಿ ಕನಸಿನ ಲೋಕಕ್ಕೆ ಹಾರಗುದರಿ ಬೆನ್ನ ಏರಿ ದೂರ ದೂರ ಹೋಗೋಣಾಂತ ತಾರೀಪು ಮಾಡುವ ಈ ಸರಕಾರ ಕಾರ್ಪೋರೇಟ ದೊರೆಗಳ ಹುನ್ನಾರಕ್ಕೆ ತಾಳ ಹಾಕುತ್ತಿರುವ ಗುಮಾನಿ ಬಲವಾಗಿ ಕಾಡುತ್ತಿದೆ. ಕರ್ನಾಟಕ ಸರ್ಕಾರವು ಭೂ ಸುಧಾರಣೆ ಕಾನೂನಿನಲ್ಲಿಯು ಬಡರೈತನನ್ನು ಬಗ್ಗು ಬಡಿಯುವ ಗುಪ್ತ ಅಸ್ತ್ರಗಳನ್ನು ಬಚ್ಚಿಟ್ಟುಕೊಂಡ ಗುಮಾನಿ ಮೂಡುತ್ತಿದೆ.ಸಿರಿವಂತರು ಸಿರಿವಂತರಾಗಿ,ಬಡವರು ಇನ್ನು ನಿರ್ಗತಿಕರಾಗುವ ಪರಿಸ್ಥಿತಿ ಪ್ರತಿದಿನ ನಡೆಯುತ್ತಿದೆ.ಇದನ್ನು ಬದಲಾಯಿಸುವ ಇಚ್ಛಾಶಕ್ತಿ ನಮ್ಮ ರಾಜಕಾರಣಿಗಳಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿದೆ.ಅಧಿಕಾರ, ಸಂಪತ್ತಿನ ಗಳಿಕೆ ಅವರ ಮುಖ್ಯ ಕಾಳಜಿಯಾಗಿ ಜನ ಹಿತದ ಕಾರ್ಯ ಹಿನ್ನೆಲೆಗೆ ಸರಿದಿದೆ. ಕವಿ ಅಂಬಿಕಾತನಯದತ್ತರು ರೈತನನ್ನು ಭೂಮಿತಾಯಿಯ ಚೊಚ್ಚಿಲು ಮಗ ಎಂದು ಕರೆದರು.ರೈತನನ್ನು ಕಂಡು ಮುಗಿಲು ಹಲ್ಲು ಕಿಸಿಯಿತು.ಆತ ಬೆಳೆದ ಬೆಳೆಯೆಲ್ಲಾ ಮಿಡಿತೆಗಳ ಮೇವಾಯಿತು.ಉಸಿರಿಗೆ ಒಮ್ಮ ಜನನ ಮರಣ ಎಂಬುದು ರೈತನ ಸ್ಥಿತಿಯಾಗಿ ಆತನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಿದೆ ಎಂದರು ಬೇಂದ್ರೆ. ಕವಿ ಕುವೆಂಪು ಅವರು ರೈತನ ದಾರುಣ ಬದುಕನ್ನು ಕಂಡು " ಕರಿಯರಾದೊಡೇಂ ಬಿಳಿಯರಾದೊಡೇಂ ಸಾಮ್ರಾಜ್ಯವಾವವಗಂ ಸುಲಿಗೆ ರೈತರಿಗೆ" ಎಂದರು.ಈ ಮಾತು ಈ ಕ್ಷಣದಲ್ಲಿಯು ನಿಜವಾಗಿದೆ. ಬಿಳಿಯ ಬ್ರಿಟಿಷರು ಬಿಟ್ಟು ಹೋದರು.ಆದರೆ ಅವರಿಗಿಂತ ಒಂದು ಪಟ್ಟು ಮಿಗಿಲಾದ ಕರಿಯ ಬ್ರಿಟಿಷರು ಅಂದರೆ ನಮ್ಮವರೆ ರೈತರನ್ನು ವಸ್ತು ಎಂದು ತಿಳಿದು ದಬ್ಬಾಳಿಕೆ ನಡೆಸುತ್ತಿದ್ದಾರೆ ದನ ಕರುಗಳಿಗೆ ಉಣುಗು ರಕ್ತ ಹೀರುತ್ತಿರುತ್ತದೆ.ಹಾಗೆ ರೈತರಿಗೆ ದಲ್ಲಾಳಿಗಳು. ಭಾರತವನ್ನು ದಲ್ಲಾಳಿಗಳ ಸ್ವರ್ಗ ಎಂದೆ ಕರೆಯಲಾಗುತ್ತದೆ.ಇವರಿಗೆ ಯಾವ ಕಾನೂನು ಬಾಧಿಸುವುದಿಲ್ಲ.ಅವರು ಅತೀತರು.ಅವರನ್ನು ಬಗ್ಗು ಬಡಿಯಲು ರಾಜಕಾರಣಿಗಳಿಂದ ಸಾಧ್ಯವಿಲ್ಲ. ಯಾಕೆಂದರೆ ಇವರು ಅವರೆ ಆಗಿದ್ದಾರೆ.ಭಾರತದ ರೈತ ಸಾಲದಲ್ಲಿ ಹುಟ್ಟಿ,ಸಾಲದಲ್ಲಿಯೆ ಬೆಳೆದು,ಸಾಲದಲ್ಲಿಯೆ ಸಾಯುವ ಪರಿಸ್ಥಿತಿ ಲಾಗಾಯ್ತಿನಿಂದ ಮುಂದುವರಿದಿದೆ.ಪರಿಸರದ ಪ್ರತಿಕೂಲ ಹವಾಮಾನವು ರೈತರಿಗೆ ಮುಳುವಾಗಿಯೆ ಇದೆ.Indian agriculture is gambling with mansoons ಎಂಬ ಮಾತು ನಿಜವಾಗಿದೆ.ಮನ್ಸೂನ ಮಳೆ ಭಾರತದ ರೈತರ ಜೊತೆ ಜೂಜಾಡುತ್ತಿದೆ ಎಂಬುದು ಆಂಗ್ಲ ಸೂಕ್ತಿಯ ಅನುವಾದ. ರೈತರ ಬಗ್ಗೆ ಬೀಡು ಬೀಸಾಗಿ ಕಾನೂನು ಮಾಡುವ ಬದಲು ರೈತರೊಂದಿಗೆ,ಅರ್ಥ ಶಾಸ್ತ್ರಜ್ಞರೊಂದಿಗೆ ಸಮಾಲೋಚನೆ ನಡೆಸಿ ಕಾನೂನು ರಚಿಸುವ ಅಗತ್ಯವಿದೆ. ಜೈ ಜವಾನ ಜೈ ಕಿಸಾನ ಎಂಬ ಲಾಲ ಬಹಾದ್ದೂರ್ ಶಾಸ್ತ್ರೀಜಿಯವರ ಮಾತನ್ನು ನಮ್ಮ ಸರಕಾರ ಎತ್ತಿ ಹಿಡಿಯ ಬೇಕಾಗಿದೆ.ರೈತರ ಸಂಕಷ್ಟ ಬೇಗನೆ ದೂರವಾಗಿ ಅವರಿಗೆ ನೆಮ್ಮದಿಯ ದಿನಗಳು ಒದಗಿ ಬರಲಿ.ದೇಶದ ಬೆನ್ನೆಲುಬಾದ ಅನ್ನದಾತನಾದ ರೈತನ ಮನ ಮತ್ತು ಮನೆಯಲ್ಲಿ ಸುಖ ಶಾಂತಿ ನೆಲೆಸಲಿ. ‌ಡಾ.ಶ್ರೀಪಾದ ಶೆಟ್ಟಿ.

ಆಲೋಚನೀಯ-೨೫
bottom of page