ಆಲೋಚನೀಯ-೧೬
ಮನುಷ್ಯ ಯಾಕೆ ಮನುಷ್ಯತ್ವವನ್ನು ಮರೆತು ಮೃಗವಾಗುತ್ತಿದ್ದಾನೆ ಎಂಬ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ.ಉತ್ತರ ಪ್ರದೇಶದ ಹಾಥರಸ್ ನಲ್ಲಿ ೧೯ ವರ್ಷದ ದಲಿತ ಯುವತಿಯ ಮೇಲೆ ನಾಲ್ಕು ಜನ ಠಾಕೂರರು ಅತ್ಯಾಚಾರ ನಡೆಸಿ ಕೊಲೆ ಮಾಡಲು ನಡೆಸಿದ ಹಲ್ಲೆ ಜಗತ್ತಿನಾದ್ಯಂತ ಸುದ್ದಿಯಾಗಿದೆ.ಈ ಘಟನೆಯಿಂದ ಉತ್ತರ ಪ್ರದೇಶದ ಆಡಳಿತಾರೂಢ ಸರ್ಕಾರ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣ ವಾಗಿದೆ.ಮನುಷ್ಯತ್ವ,ಸಹಾನುಭೂತಿ, ದಯೆ, ಅನುಕಂಪೆ, ಎಲ್ಲವು ಮೂಲೆಗೆ ಸರಿದು ಜನ ಕಂಗಾಲಾಗಿದ್ದಾರೆ.ಅತ್ಯಚಾರ ಮಾಡಿದವರು ಆಕೆ ಮತ್ತೆ ಬದುಕ ಬಾರದು ಎಂಬ ಉದ್ದೇಶದಿಂದ ಮಾರಣಾಂತಿಕ ಹಲ್ಲೆಯನ್ನು ನಡೆಸಿ,ಆಕೆ ಸತ್ತು ಹೋಗುವಂತೆ ಪ್ರಯತ್ನ ನಡೆಸಿದ್ಣಾರೆ. ಅತ್ಯಾಚಾರವನ್ನು ಸಹಿಸಿಕಂಡು ಬಲಿ ಪಶುಗಳಾಗುವ ದಮನಿತರ ಗೋಳನ್ನು ಕೇಳಲಾರದ ಸಂದರ್ಭ ಸೃಷ್ಟಿಯಾಗಿದೆ. ಕಾರ್ಯಾಂಗ,ಶಾಸಕಾಂಗ ಕುರುಡಾಗಿದೆ, ಕಿವುಡಾಗಿದೆ,ಮೂಕವಾಗಿದೆ.ಸಾಕ್ಷಿ ನಾಶಮಾಡುವ ಎಲ್ಲ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡಿ ಈಗ ಎಂಟು ಸಿಸಿ ಟಿ.ವಿ,ಪೋಲಿಸ್ ಪಹರೆ ಎಲ್ಲವನ್ನು ವ್ಯವಸ್ಥೆ ಮಾಡಲಾಗಿದೆ.ಊರು ಸೂರೆಯಾದ ಮೇಲೆ ಅಗಸೆ ಬಾಗಿಲನ್ನು ಹಾಕಿಕೊಂಡ ಗಾದೆಯ ಹಾಗೆ. ೧೯೭೮ ನೆ ಇಸ್ವಿಯಲ್ಲಿ ಕ.ವಿ.ವಿ.ಧಾರವಾಡದ ಯೂನಿಯನ್ ಮತ್ತು ಜಿಮಖಾನಾ ವಿಭಾಗ ಏರ್ಪಡಿಸಿದ ಆಶು ಕವಿತೆಯ ರಚನೆಯ ಸಂದರ್ಭದಲ್ಲಿ ಅವರು ಕೊಟ್ಟ ಪ್ರಜಾಪ್ರಭುತ್ವ ಎಂಬ ವಿಷಯದ ಬಗ್ಗೆ ನನ್ನ ಕವಿತೆಯ ಕೊನೆಯ ಸಾಲು "ಉಳ್ಳವರು ಶಿವಾಲಯವ ಕಟ್ಟಿಸಿ ಸ್ವರ್ಗಕ್ಕೆ ಪ್ರಮೋಶನ್ ಗಿಟ್ಟಿಸುವ ಇಂಡಿಯಾದಲ್ಲಿ ಪ್ರಜಾ ಪ್ರಭುತ್ವ ಪಠ್ಯ ಪುಸ್ತಕ ಮತ್ತು ರಾಜಕಾರಣಿಗಳ ಭಾಷಣದಲ್ಲಿ ಮಾತ್ರ ಉಳಿಯುತ್ತದೆ ಸ್ವಾಮಿ" ಇಂತಹ ಸಂಗತಿಗಳು ಬಹಳಷ್ಟು ಘಟಿಸಿವೆ.ಉಳ್ಳವರನ್ನು ಕಾನೂನಿನ ಬಲೆಯಿಂದ ರಕ್ಷಿಸುವ ಪ್ರಯತ್ನ ಅವ್ಯಾಹತವಾಗಿ ನಡೆದಿದೆ. "ಕಾನೂನು ಜೇಡರ ಬಲೆಯಂತೆ ಮಿಡಿತೆಗಳು ಕ್ರಿಮಿ ಕೀಟಗಳು ಆ ಬಲೆಗೆ ಬೀಳುತ್ತವೆ.ಆದರೆ ಹದ್ದು,ಗಿಡುಗಗಳು ಬಲೆಯನ್ನು ಹರಿದುಕೊಂಡು ಹಾರಿ ಹೋಗುತ್ತವೆ.ಹಾಥರಸ್ ಅತ್ಯಾಚಾರದ ಪ್ರಕರಣದಲ್ಲಿಯು ಇದೆ ಪರಿಸ್ಥಿತಿ ಉಂಟಾಗ ಬಹುದು. ನಮ್ಮ ನಾಡಿನ ಸಾಕ್ಷಿ ಪ್ರಜ್ಞೆಯಂತಿರುವ ಸಾಹಿತಿ ದೇವನೂರ ಮಹಾದೇವ ಅವರು ಸಂತ್ರಸ್ಥೆಯು ನಡೆದಾಡಿದ ನೆಲದ ಮಣ್ಣನ್ನು ತಂದು ಆಕೆಯ ಸ್ಮಾರಕವನ್ನು ರಚಿಸುವ ಮಾತನಾಡಿದ್ದಾರೆ ಜಾತೀಯತೆ,ಅಸ್ಪೃಶ್ಯತೆಯಿಂದ ದಡ್ಡು ಗಟ್ಟಿ ಹೋದ ಬಹು ಸಂಖ್ಯಾತ ಸಮುದಾಯದ ಅತ್ಯಾಚಾರಿಗಳಿಗೆ,ಸವರ್ಣೀಯರಿಗೆ, ಕಠಿಣ ಶಿಕ್ಷೆ ಆಗ ಬೇಕಾಗಿದೆ. ಆಗ ಜನರಿಗೆ ಈ ದೇಶದ ನ್ಯಾಯಾಂಗದ ಬಗ್ಗೆ ಭರವಸೆ ಮತ್ತು ಗೌರವ ಹೆಚ್ಚುತ್ತದೆ.' ಕರಿಯರಾದೊಡೇಂ ಬಿಳಿಯರಾಡೇಂ ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ ' ಎಂಬಲ್ಲಿ ದಲಿತರಿಗೆ ಎಂಬ ಪದವನ್ನು ಸೇರಿಸ ಬೇಕಾಗಿದೆ. ದಲಿತ ಚಳುವಳಿಗಳು ನಡೆದಿವೆ.ಆದರೆ ಬಡಪಾಯಿ ದಲಿತರ ಪಾಡು ದಯನೀಯವಾಗಿಯೇ ಇದೆ. ಬೆಲ್ಚಿ,ತತ್ತೂರು,ಬೆಂಡಿಗೇರಿಗಳು ದಲಿತರ ಬಾಳಿನ ಇತಿಹಾಸದಲ್ಲಿ ಕಪ್ಪು ಚುಕ್ಕೆಗಳಾಗಿ ಉಳಿದಿವೆ. ಉತ್ತರ ಭಾರತದ ಮಹಿಳೆಯರು ಮರ್ಯಾದಸ್ತರು,ಧರ್ಮ ಬೀರುಗಳು,ಕಷ್ಟ ಸಹಿಷ್ಣುಗಳು ಆಗಿದ್ದಾರೆ. ೨೦೦೨ ನೆ ಇಸ್ವಿಯಲ್ಲಿ ನಾನು ವಾರಣಾಸಿ,ಗಯಾ,ಕೇದಾರ ನಾಥ,ಬದರಿ,ಗಂಗೋತ್ರಿ,ಉತ್ತರ ಕಾಶಿ ಆಗ್ರಾ,ಮಥುರಾ,ಕುರುಕ್ಷೇತ್ರ, ದೇಹಲಿ,ಚಂಡಿಗಡ,ರಾಜಸ್ಥಾನ,ಹರಿಯಾಣದ ಕಡೆ ಪ್ರವಾಸ ಮಾಡಿದಾಗ ಅಲ್ಲಿಯ ಮಹಿಳೆಯರ ದುಡಿಮೆ,ಕಷ್ಟ ಸಹಿಷ್ಣುತೆಯನ್ನು ಕಂಡು ಅವರ ಬಗ್ಗೆ ಗೌರವ ತಾಳಿರುವೆ.ಬದರಿನಾಥದಲ್ಲಿ ಸುಂದರಿ ಯರಾದ ತರುಣಿಯರು ಗೂಡಂಗಡಿಯಲ್ಲಿ ಅದ್ರಕ್ ಚಾಯ್ ಮಾಡಿಕೊಡುತ್ತಿದ್ದರು.ಹೆಣ್ಣು ಮಕ್ಕಳು ಹೊಲದ ಕೆಲಸ,ಹೊರೆ ಹೊರುವ ಕಾರ್ಯ ಮಾಡುತ್ತಿದ್ದರು.ಘಂಡಸರು ಕುಳಿತು ಕಾಲ ಹರಣ ಮಾಡಿತ್ತಿದ್ದರು.ರಾಜಸ್ಥಾನದ ಉದಯಪುರದ ಗ್ರೀನ್ ಮಾರ್ಬಲ್ ಕಾರ್ಖಾನೆಯಲ್ಲಿ ಮಾರ್ಬಲನ್ನು ಹೊರುವ ಕೆಲಸ ಮಾಡುವ ಮಹಿಳೆಯರು ರಾಜ ಕುಮಾರಿಯರಂತೆ ಕಂಡಿದ್ದರು. ಹತ್ತೊಂಬತ್ತರ ಹರೆಯದ ಯುವತಿಯನ್ನು ನಾಲ್ವರು ದಾಂಡಿಗರು ಅತ್ಯಾಚಾರ ಮಾಡಿದ ಈ ಘಟನೆಯನ್ನು ಸರ್ಕಾರ ಸಿ.ಬಿ.ಐ.ತನಿಖೆಗೆ ಒಪ್ಪಿಸಿ ಒಳ್ಳೆಯ ಕೆಲಸ ಮಾಡಿದೆ. ತಾಯಿ,ಅಕ್ಕ,ತಂಗಿ,ಗೆಳತಿ,ಸಂಗಾತಿ,ಸೇವಕಿ,ಶಿಕ್ಷಕಿ ಹೀಗೆ ಹತ್ತು ಹಲವು ಪಾತ್ರಗಳನ್ನು ದಕ್ಷತೆಯಿಂದ ನಿಭಾಯಿಸುವ ಮಹಿಳೆಯರ ಮೇಲಿನ ಅತ್ಯಾಚಾರ ನಿಲ್ಲಲಿ.ತಪ್ಪಿತಸ್ಥರಿಗೆ ಶಿಕ್ಷೆಯಾಗಿ ಇನ್ನು ಮುಂದೆ ಇಂತಹ ದುರ್ಘಟನೆಗಳು ನಡೆಯದಂತಹ ಪಾಠವೊಂದು ಜನರಿಗೆ ಮನವರಿಕೆಯಾಗಲಿ.ಹಾಥರಸ್ ಪ್ರಕರಣದ ತೀರ್ಪು ನಮ್ಮ ನ್ಯಾಯಾಂಗದ ಘನತೆಯನ್ನು ಎತ್ತಿ ತೋರಲಿ.ಮಹಿಳೆಯರು,ಹೆಣ್ಣು ಮಕ್ಕಳು ನಿರ್ಭೀತಿಯಿಂದ ನೆಮ್ಮದಿಯಿಂದ ಬದುಕುವಂತಾಗಲಿ. - ಡಾ.ಶ್ರೀಪಾದ ಶೆಟ್ಟಿ.