ಆಲೋಚನೀಯ ದಿನಕರ ದೇಸಾಯಿ
ಹಣತೆ ಹಚ್ಚಿದ ದಿನಕರ ದೇಸಾಯಿ ಇಂದು ಸಮಾಜವಾದಿ ಕವಿ,ಜನಪರ ಪತ್ರಕರ್ತ,ರೈತನಾಯಕ,ಕೆನರಾ ವೆಲ್ ಫೇರ್ ಟ್ರಸ್ಟನ ಸಂಸ್ಥಾಪಕ,ಶಿಕ್ಷಣ ತಜ್ಞ,ರೈತ ನಾಯಕ,ಕಾರ್ಮಿಕ ಮುಂದಾಳು ,ಜನಸೇವಕ ಪತ್ರಿಕೆಯ ಪ್ರಕಾಶಕ,ಬರಹಗಾರ,ರಾಜಕೀಯ ಮುತ್ಸದ್ದಿ ದಿನಕರ ದೇಸಾಯಿಯವರ ಜನ್ಮ ದಿನ. ' ನಾನು ಹುಟ್ಟಿದ್ದು ಸಪ್ಟಂಬರದ ಹತ್ತು ನೆಲತಾಯಿ ಬಸಿರಾಗಿ ಕದಿರು ಮೂಡಿತ್ತು ಹಸಿರು ಸೀರೆಯನುಟ್ಟ ಧರೆಗೆ ಆನಂದ ಇದು ನನ್ನ ಸೌಭಾಗ್ಯವೆನ್ನುವೆನು ಕಂದ ನನಗೆ ಮಕ್ಕಳು ಮೂರು ಹಿರಿಯ ಮಗು ಬಾಲೆ ಇನ್ನೊಂದು ಹೆಣ್ಣು ಹುಟ್ಟಿದಳು ಆಮೇಲೆ ಗಂಡು ಬೇಕೆಂದು ಬಯಸಿದೆವು ಬಹಳಷ್ಟು ಕೊನೆಗೆ ಹುಟ್ಟಿದ ಗಂಡು: ಶಿಕ್ಷಣದ ಟ್ರಸ್ಟು ಒಳಿತು ಮಾಡಿದರೆ ಅದು ಪುಣ್ಯಗಳ ರಾಶಿ ಕೆಡುಕು ಮಾಡಿದರೆ ಅದು ಪಾಪ ಬಿಕನಾಸಿ ಯಾವ ಪೂಜೆ ಮಾಡಿದರು ವ್ಯರ್ಥ; ಜನಸೇವೇಯೇ ಪೂಜೆ ಇದುವೆ ಪುರುಷಾರ್ಥ ಮೊನ್ನೆಯೆ ಹರಿದು ಹಾಕಿದೆನು ಜನಿವಾರ ಜನಿವಾರ ಜಾತಿವಾದಿಯ ಸೂತ್ರಧಾರ ಜಾತಿ ಎಂಬುದು ಕೋತಿ ಮಾನಸಿಕ ಗೋಡೆ ಈ ಗೋಡೆ ಎನ್ನುವುದು ಭಾರತದ ಪೀಡೆ ಈ ಎಲ್ಲ ಚೌಪದಿಗಳು ದಿನಕರ ದೇಸಾಯಿಯವರ ವ್ಯಕ್ತಿತ್ವ ಮತ್ತು ನಿಲುವನ್ನು ಸಾದರ ಪಡಿಸುತ್ತವೆ. ದಿನಕರ ದೇಸಾಯಿಯವರ ಬದುಕು ಮತ್ತು ಬರಹಗಳು ಅನ್ಯೋನ್ಯವಾಗಿದ್ದವು. ಅವರು ನುಡಿದಂತೆ ನಡೆದರು. ನಡೆದಂತೆ ನುಡಿದರು. ಆ ಕಾರಣ ಅವರ ವ್ಯಕ್ತಿತ್ವ ಮತ್ತು ಎಲ್ಲರಿಗು ಆದರ್ಶ ಮತ್ತು ಅನುಕರಣೀಯ. ಸರ್ವಜ್ಞ,ವಿಲಿಯಂ ಬ್ಲೇಕ್,ಡಿ.ವಿ.ಗುಂಡಪ್ಪ ಅವರ ರಚನೆಗಳು ತನ್ನ ಚೌಪದಿಯನ್ನು ಪ್ರಭಾವಿಸಿವೆ ಎಂದವರು ದಿನಕರರು. ಅವರ ಬಹಳಷ್ಟು ಚುಟಕಗಳು ಸಭಾಷಿತಗಳಂತಿವೆ. ದಿನಕರ ದೇಸಾಯಿಯವರ ಕಾವ್ಯ,ಕೊಂಕಣಿ ಕವನ,ಚುಟಕ,ಪ್ರವಾಸ ಕಥನ,ಪತ್ರಿಕೋದ್ಯಮ,ಶಿಕ್ಷಣ ಸಂಸ್ಥೆಗಳ ಸ್ಥಾಪನೆ,ರೈತ ಸಂಘಟನೆ,ರಾಜಕಾರಣ,ಕಾರ್ಮಿಕ ಸಂಘಟನೆ ಈ ಎಲ್ಲ ಕಡೆಗಳಲ್ಲಿ ಅವರ ಜನಪರ ಧೋರಣೆ ಸಮುದಾಯದ ಹಿತಾಕಾಂಕ್ಷೆ ಕೆಲಸ ಮಾಡಿದೆ. ಅವರು ಯಾರ ಮರ್ಜಿಗಾಗಿಯು ಕಾಯ್ದು ಕುಳಿತವರಲ್ಲ. ಅವರು ಅರಿತ ಶರಣರು ಮರೆತ ಮಾನವರಲ್ಲ. ಅವರು ಜನಸೇವಕ ಪತ್ರಿಕೆಯ ಮೂಲಕ ವಿಧಾಯಕ ಪತ್ರಿಕೋದ್ಯಮ ಯಾವ ರೀತಿ ಇರ ಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟವರು.ತಮ್ಮ ಸಂಸ್ಥೆಗಳಿಗೆ ಜನರ ಹೆಸರನ್ನೆ ಇಟ್ಟರು. ಜನತಾ ವಿದ್ಯಾಲಯ, ಜನಸೇವಕ,ಜನ ಮುದ್ರಣಾಲಯ,ಜನತಮನವರಿಕೆ,ಹೀಗೆ ಜನರನ್ನೆ ಮುಖ್ಯವಾಗಿಸಿದರು. ಆಳುವ ಸರಕಾರದ ತಪ್ಪು ನೀತಿಗಳನ್ನು ತಮ್ಮ ಚೌಪದಿ,ಗುಮಟೆ ಹಾಡು,ಜನಸೇವಕ ಪತ್ರಿಕೆಯ ಸಂಪಾದಕೀಯದ ಮೂಲಕ ಪ್ರತಿ ಭಟಿಸಿದವರು. ' ಸರಕಾರ ಸುಳ್ಳು/ ಜನರಿಗೆ ಮಳ್ಳು ಬಡವರದಲ್ಲಾ ಒಡೆಯರದೊ' ಎಂದು ಛೇಡಿಸಿದವರು ದಿನಕರರು. ಹಳ್ಳಿಗಾಡಿನಲ್ಲಿ ಕಳೆದ ಶತಮಾದ ೫೦ ಮತ್ತು ೬೦ ರ ದಶಕದಲ್ಲಿ ಜನತಾ ವಿದ್ಯಾಲಯಗಳ ಸ್ಥಾಪನೆ ಮಾಡಿ ಅಲ್ಲಿಯ ವಿದ್ಯಾರ್ಥಿಗಳ ಬಾಳಿಗೆ ಬೆಳಕನ್ನು ನೀಡಿದವರು. ಯಾವುದೆ ಕೆಲಸ ನನ್ನಿಂದಲೆ ಆಯಿತು ಎಂಬ ಅಹಂಕಾರವು ಹತ್ತಿರವು ಸುಳಿಯಗೊಡಲಿಲ್ಲ. 'ನನ್ನ ದೇಹದ ಬೂದಿಯನು ಗಾಳಿಯಲಿ ತೂರಿ ಬಿಡಿ ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ ಎಂದು ಕವನದಲ್ಲಿಯೆ ತನ್ನ ಮನದಿಂಗಿತನವನ್ನು ವ್ಯಕ್ತ ಪಡಿಸಿದ ಕ್ರಾಂತದರ್ಶಿ ಕವಿಗೆ ಅವರ ಜನ್ಮ ದಿನದ ಈ ಶುಭಾಶಗಳು. ಡಾ.ಶ್ರೀಪಾದ ಶೆಟ್ಟಿ ದಿನಕರ ದೇಸಾಯಿಯವರ ಜನ್ಮ ದಿನದ ನಿಮಿತ್ತ ಆಲೋಚನೀಯ ನಿಮ್ಮ ಓದಿಗಾಗಿ, ಸಂಪಾದಕ