
ಆನಂದ ಪಾಟೀಲರ ‘ಹೂ ಅಂದ್ರ ಹೂ’
ಮಳೆಗಾಲ ಮುಗಿದು ತಿಳಿ ಬಿಸಿಲು ಕಾಣಿಸಿಕೊಂಡಾಗ ಗಿಡಮರಗಳ ಎಲೆಗಳೆಲ್ಲ ಶುಭ್ರವಾಗಿ ಬಿಸಿಲಿಗೆ ಫಳಫಳ ಹೊಳೆಯುತ್ತಿರುತ್ತವೆ. ಎಲ್ಲೆಲ್ಲೂ ಹಸಿರು, ಜುಳು ಜುಳು ಹರಿಯುವ ನೀರಿನ ಕಾಲುವೆ ದಾಟಿ ತೋಟದ ಹಸಿರಿಗೆ ಬಂದು ನಿಂತರೆ ಇಬ್ಬನಿಯಿಂದ ತುಂಬಿದ ಹುಲ್ಲು ಕಾಲನ್ನು ತಂಪಾಗಿಸುತ್ತದೆ. ಆಗಲೇ ಕಾಡು ಅರಿಸಿನದ ಗಿಡದಲ್ಲಿ ಅಪರೂಪಕ್ಕೆ ನೆಲದಡಿಯಿಂದಲೇ ಮೂಡಿಬಂದ ತೇರಿನಂತಹ ಹೂ ಅರಳಿರುತ್ತದೆ. ಸುಮಾರು ಒಂದು ಅಡಿ ಉದ್ದವಿರುವ ತಿಳಿ ಕೆಂಪುಬಣ್ಣದ ಹೂವಿನ ಪ್ರತಿ ಎಸಳಿನ ಬುಡದಲ್ಲೂ ನೀರು ಸಂಗ್ರಹವಾಗಿರುತ್ತದೆ. ಅಲ್ಲಿ ಪುಟ್ಟ ಕಪ್ಪೆಗಳೂ ಕೂತಿರಬಹುದು. ನಾವು ಶಾಲೆಗೆ ಹೋಗುವಾಗ ಈ ಹೂವನ್ನು ಮೃದುವಾಗಿ ಕಿತ್ತು ಅದರಲ್ಲಿರುವ ನೀರನ್ನು ಬೇರೆಯವರಿಗೆ ಸಿಡಿಸುತ್ತಿದ್ದೆವು. ಚಳಿಗಾಲದ ಪ್ರಾರಂಭದ ದಿನವಾದ್ದರಿಂದ ಮತ್ತಷ್ಟು ಚಳಿಯಾಗಿ ನೀರು ತಾಗಿದವರು ಓಡುತ್ತಿದ್ದರು. ಹೂವಿನ ಪರಿಮಳ ನೀರಿನೊಂದಿಗೆ ಸೇರಿಕೊಂಡು ಒಂದು ರೀತಿ ಆನಂದ ಉಂಟು ಮಾಡುತ್ತಿತ್ತು. ಆನಂದ ಪಾಟೀಲರು ಬರೆದ ‘ಹೂ ಅಂದ್ರ ಹೂ’ ಪುಸ್ತಕ ಓದಿದಾಗಲೂ ಅಂಥಹದೇ ಆನಂದ ನಮಗೆ ಸಿಗುತ್ತದೆ. ಹೂ ಹೂ ಹೂ ಹೂ ಅಂದ್ರ ಹೂ ಹತ್ತಿ ಹಾಂಗ ಪಕಳಿ ಇಟಗೊಂಡ ಛತ್ರಿ ಹಾಂಗ ಗಿಡದಾಗ ಹ್ಯಾಂಗರ ಮುದ್ದಾಗಿ ಕೂತಿತ್ತಿದು..... ಹರದು ಗಿರದು ಮಾಡಿದರ ಚಾಳಿ ಗಡ್ಡಿ ಪೂ ‘ಹತ್ತಿ ಹಾಂಗ ಪಕಳಿ ಇಟಗೊಂಡ, ಛತ್ರಿ ಹಾಂಗ ಗಿಡದಾಗ ಹ್ಯಾಂಗರ ಮುದ್ದಾಗಿ ಕೂತಿತ್ತಿದು’ ಎಷ್ಟು ಆಪ್ತವಾದ ಸಾಲು. ಹತ್ತಿಯ ಮೃದುತನ, ಛತ್ರಿಯ ಅರಳುವಿಕೆ ಎಲ್ಲ ಮಕ್ಕಳಿಗೆ ಆಪ್ತವೇ, ಪರಿಚಿತವೇ. ನಾವು ಮಕ್ಕಳಾಗದೆ ಇಂಥಹ ಸಾಲುಗಳನ್ನು ಬರೆಯಲಾಗದು. ದಾಸವಾಳ ಹೂ ಕೊಯ್ಯುವಾಗ ತಲೆಯ ಮೇಲೆ ಬೀಳುವ ನೀರ ಹನಿ, ಪಾರಿಜಾತದ ಹೂ ನೆಲದಿಂದ ಎತ್ತಿ ತೆಗೆಯುವಾಗ ವಹಿಸಬೇಕಾದ ಕಾಳಜಿ, ಮಲ್ಲಿಗೆ ಹೂ ಕೊಯ್ಯುವಾಗ ಅನುಭವಿಸುವ ಪರಿಮಳ, ಕರವೀರ ಹೂವಿನ ಬುಡದಲ್ಲಿರುವ ಸಿಹಿ ಎಲ್ಲ ಮಕ್ಕಳಿದ್ದಾಗ ಖುಷಿ ಕೊಟ್ಟಿವೆ. ಈಗಲೂ ಖುಷಿ ಕೊಡುತ್ತಲೇ ಇವೆ. ‘ಹೂ ಅಂದ್ರ ಹೂ’ ಸಂಕಲನದಲ್ಲಿ ಇಂತಹ ಖುಷಿಗಳೆಲ್ಲ ಬಾಲ್ಯದ ಬೇರೆ ಬೇರೆ ಭಾವ ಭಾಷೆಯಲ್ಲಿ ಅರಳಿವೆ ಎನ್ನಬಹುದು. ಮಕ್ಕಳ ಸಾಹಿತ್ಯದಲ್ಲಿ ಪಾಟೀಲರದು ಬಿಡುವಿಲ್ಲದ ಶ್ರಮ. ಪ್ರಪಂಚದ ಮಕ್ಕಳ ಸಾಹಿತ್ಯದ ವಿಸ್ತಾರ ಓದಿನ ಅರಿವನ್ನು ಹೊಂದಿರುವ ಅವರು ನನ್ನಂಥ ಅನೇಕ ಮಕ್ಕಳ ಸಾಹಿತಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ತನ್ಮೂಲಕ ಕನ್ನಡದ ಮಕ್ಕಳ ಸಾಹಿತ್ಯದಲ್ಲಿ ಹೊಸ ಹರಿವನ್ನು ಉಂಟು ಮಾಡಲು ಶ್ರಮಿಸುತ್ತಿದ್ದಾರೆ. ಅವರು ಬರೆದ ಗದ್ಯ ಪದ್ಯಗಳಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. “ಪಾಟೀಲರು ಲಲಿತ ಪ್ರಬಂಧ, ಲಹರಿ, ಸ್ವಾರಸ್ಯಕರ ಸಂಭಾಷಣೆ ಹಾಗೂ ಜನಪದ ಲಯಗಳ ಬಳಕೆಯಿಂದ ಮಕ್ಕಳ ಸಾಹಿತ್ಯದ ಸ್ವರೂಪಗಳಲ್ಲಿ ನಾವೀನ್ಯತೆ ತಂದವರು” ಎನ್ನುವ ಬಸು ಬೇವಿನಗಿಡದ ಅವರ ಮಾತು ಸತ್ಯ. ಸಂಧ್ಯಾ ಸಾಹಿತ್ಯ ವೇದಿಕೆಯ ಗೆಳೆಯರೊಂದಿಗೆ ಕೂಡಿ ನಾಡಿನ ತುಂಬೆಲ್ಲ ಮಕ್ಕಳ ಸಾಹಿತ್ಯದ ಓದು, ಸಂವಾದ, ಕಮ್ಮಟ, ಚರ್ಚೆ ಹೀಗೆ ಹಲವಾರು ಕಾರ್ಯ ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಮಾಡುತ್ತಿದ್ದಾರೆ. ‘ಅಲರು’ ‘ಮುಗುಳು’ ಮುಂತಾದ ಅವಲೋಕನ, ಅಧ್ಯಯನ, ವಿಮರ್ಶಾ ಕೃತಿಗಳನ್ನು ನೀಡಿ ಮಕ್ಕಳ ಸಾಹಿತ್ಯದ ವಿವಿಧ ಆಯಾಮಗಳನ್ನು ಗುರುತಿಸಿದ್ದಾರೆ. ಮಕ್ಕಳಿಗೆ ಸುಂದರ ಹೂ ಕಂಡರೆ ಕಿತ್ತು ಖುಷಿ ಪಡುವ ಆಸೆ. ಹೂ ಬೆಳೆಸಿದ ಹಿರಿಯರಿಗೆ ಅವನ್ನು ಗಿಡದಲ್ಲಿಯೇ ಉಳಿಸಿ ಅವುಗಳ ಸೌಂದರ್ಯ ಸವಿಯುವ ಆಸೆ. ಅದನ್ನೇ ಪಾಟೀಲರು ಹೇಳಿರುವ ರೀತಿ ನೋಡಿ.... ಮಲಗಿ ಹೂ ಬಿದ್ದಾವ ಮಾಟನ ಹೆಜ್ಜೆ ಮೂಡ್ಯಾವ ಹೂ ಯಾರ ಹರದಾರ ನಮ್ಮ ಕೈಯಾಗ ಸಿಗತಾರ! ಫಳ ಫಳ ಮಿಂಚು ಗುಡುಗಿನೊಂದಿಗೆ ರಪಾ ರಪಾ ಮಳೆ ಶುರುವಾದರೆ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಭಯವಾಗುತ್ತದೆ. ಆಗ ದೊಡ್ಡವರು ಮಕ್ಕಳನ್ನು ಮನೆ ಒಳಗೆ ಕರೆದುಕೊಂಡು ಬಾಗಿಲು ಹಾಕಿ ಬೆಚ್ಚನೆಯ ಚಾದರ ಹೊದ್ದು ಕುಳಿತರೆ ಮಕ್ಕಳಿಗೆ ಹೊರಗಿನ ಮಳೆಯ ಕುರಿತೇ ಕುತೂಹಲವಿರುತ್ತದೆ.... ರಪಾ ರಪಾ ಮಳಿ ಒಳಗ ಹೋಗೋಣ ನಡಿ ಎಂಥಾ ಜೋರ ಮಳಿ! ಕಿಟಗಿ ಬಾಗಲಾ ತಗಿ. ‘ನೆಲ್ಲಿ ಕಾಯಿ ಗಿಡದಾಗ ಕಲ್ಲ ಬಿದ್ದಾವ ನೋಡ್ರಿ’ ಎನ್ನುವ ಪಾಟೀಲರು ರಜೆ ಸಿಕ್ಕಾಗ ಮಕ್ಕಳು ಮಾವಿನ ಮರದಡಿಯಲ್ಲೋ, ನೆಲ್ಲಿಯ ಗಿಡದಡಿಯಲ್ಲೋ ಇರುತ್ತಾರೆ ಎನ್ನುವುದನ್ನು ಸಹಜವಾಗಿ ಇಡುತ್ತಾರೆ. ಪಾಟಿ ಪುಸ್ತಕ ನೀಟಾಗಿ ಮಾಡದಾಗ ಹ್ಯಾಂಗ ಇಟ್ಟಾನ ಪುಟ್ಟ್ಯಾ ಶ್ಯಾಣ್ಯಾ, ಅಭ್ಯಾಸ ಮಾಡಿ ಆಟಾ ಆಡ್ಲಿಕ್ಕೆ ಹೋಗ್ಯಾನ ಎನ್ನುವಲ್ಲಿ ಆಡಲು ಹೋಗುವಾಗ ದೊಡ್ಡವರ ತಕರಾರು ಬರದಂತೆ ಅಭ್ಯಾಸ ಮಾಡಿದ ಕುರುಹಾಗಿ ಪಾಟಿ ಪುಸ್ತಕ ನೀಟಾಗಿ ಇಟ್ಟಿದ್ದಾನೆ ಎನ್ನುವುದನ್ನು ಒಗಟಾಗಿ ಹೇಳುತ್ತಾರೆ. ಮಕ್ಕಳಿಗೆ ಅಜ್ಜಿ ಎಂದರೆ ಎಲ್ಲಿಲ್ಲದ ಪ್ರೀತಿ. ಅಜ್ಜಿಯ ಸಂಗಡ ಆಡುತ್ತ ಅವಳನ್ನು ಕೀಟಲೆ ಮಾಡುತ್ತ ಇರುತ್ತಾರೆ. ಅಜ್ಜಿಗೂ ಅದು ಸುಖವೇ. ಅಂಥಹುದೇ ಪ್ರಸಂಗ ಇಲ್ಲಿದೆ. ಅಜ್ಜೀ ತುರುಬು ಚಕ್ಲೀ ಬಳ್ಳಿ ಹಂಗ ಹಿಂದ ಹೋಗಿ ಜಗ್ಗಿದ್ರ ಹಾವಿನ ಮರಿ ಹಂಗ! ಪಕ್ಷಿಗಳ ಕುರಿತಾಗಿ, ಪ್ರಾಣಿಗಳ ಕುರಿತಾಗಿ ಮಕ್ಕಳಿಗೆ ಎಲ್ಲಿಲ್ಲದ ಕುತೂಹಲ. ಹಕ್ಕಿ ಗೂಡು ಕಟ್ಟುವಾಗ ನೋಡಬೇಕು. ರಾತ್ರಿಯಾದಾಗ ಅದು ಏನನ್ನು ಹೊದೆದುಕೊಂಡು ಮಲಗುತ್ತದೆ, ಮಂಗ ಮರದ ಮೇಲೆ ನಿದ್ದೆ ಮಾಡೋದು ಹೇಗೆ, ಅದು ಮರದ ಮೇಲೇ ಮರಿಗಳನ್ನು ಹೇಗೆ ಸಾಕುತ್ತದೆ, ಹಾವು ಕಾಲಿಲ್ಲದೆಯೇ ಚಲಿಸುವುದು ಹೇಗೆ ಹೀಗೆಲ್ಲ ಪ್ರಶ್ನೆಗಳು ಚಿಕ್ಕವನಿದ್ದಾಗ ನನ್ನಲ್ಲಿ ಮೂಡುತ್ತಿದ್ದವು. ಅಂಥಹ ಕುತೂಹಲ ಸಂಗತಿಯನ್ನೇ ಪಾಟೀಲರು ‘ಗುಬ್ಬಿ ಗೂಡಿನಲ್ಲಿ ಗುಬ್ಬಿ ಮರಿ ಈಗ ಏನು ಮಾಡುತ್ತಿರಬಹುದು ಎಂದು ಪ್ರಶ್ನಿಸುತ್ತ ನಿದ್ದೆ, ಊಟ, ಊಂಹೂಂ ಯಾವುದೂ ಅಲ್ಲ ಎನ್ನುತ್ತ ಕತಿ ಕೇಳೂದಕ್ಕ ಅವ್ವ ಬರೂ ದಾರಿ ಕಾಯತಿರಬೇಕ ಎಂದು ಹೇಳಿ ಮಕ್ಕಳಿಗಿರುವ ಕಥೆಯ ಮೇಲಿನ ಒಲವನ್ನು ತೆರೆದಿಡುತ್ತಾ ಇನ್ನಷ್ಟು ಒಲವನ್ನು ಅವರಲ್ಲಿ ಬಿತ್ತುವ ಪ್ರಯತ್ನ ಮಾಡಿದ್ದಾರೆ. ಮಕ್ಕಳು ಕಂಪೌಂಡ ಗೋಡೆ ಹತ್ತಿ ಕೂತು ಅದನ್ನೇ ಕುದುರೆ ಮಾಡಿಕೊಂಡು ತಮ್ಮ ಮನಸ್ಸು ಹರಿದಲ್ಲೆಲ್ಲ ಅದನ್ನು ಟಕ ಟಕ ಓಡಿಸುತ್ತಾರೆ. ಪೇಟೆ ಪಟ್ಟಣ ಎಲ್ಲಾ ತಿರುಗುತ್ತಾರೆ. ಊರುಗಳೆಲ್ಲ ಖರ್ಚಾದಾಗ ಸಾಕು ಸಾಕು ಹೊತ್ತಾತು ಹೋಗೋಣಿನ್ನ ಅಂದಾರ ಮತ್ತಿನ್ನೇನ ಮಾಡ್ತಾರ? ಹಿಂದ ತಿರುಗಿ ಕೂತಾರ ಮನೀ ಕಡೆ ಓಡಸ್ಯಾರ ಕಲ್ಪನೆಯ ಗಾಡಿಯಾದರೂ....... ಮನಸ್ಸಿನಲ್ಲೇ ಓಡಾಟವಾದರೂ ಅದನ್ನೇ ಮೂರ್ತರೂಪದಲ್ಲೇ ಕಾಣುವುದು ಮಕ್ಕಳ ಪ್ರಪಂಚ. ಅದಕ್ಕೇ ಮನೆ ಕಡೆ ಗಾಡಿಯನ್ನು ಹೊರಡಿಸುವಾಗ ಕಂಪೌಂಡ ಗೋಡೆಯ ಮೇಲೆ ತಿರುಗಿ ಕುಂತಿದ್ದಾರೆ ಎನ್ನುವಲ್ಲಿ ಮಕ್ಕಳ ಲೋಕದ ಸೂಕ್ಷ್ಮ ಚಿತ್ರಣವಿದೆ. ತೆಂಗಿನ ಕಾಯಿ ಎಳನೀರ ಸೀಂ ಸಕ್ರಿ ಹಾಂಗ ಮ್ಯಾಲ ಹತ್ತಿ ಹೊಕ್ಕಾವ ಇವು ಕಾಯೊಳಗ ಹ್ಯಾಂಗ? ಹೌದು ತೆಂಗಿನ ಮರದ ತುದಿಯಲ್ಲಿ ನೀರು ಹೋದದ್ದು ಹೇಗೆ? ಸಕ್ಕರೆ ತುಂಬಿದ್ದು ಹೇಗೆ? ಎನ್ನುವುದು ಕುತೂಹಲ. ಇಂಥಹ ಕುತೂಹಲವೇ ಮಕ್ಕಳ ಲೋಕದಲ್ಲಿ ತುಂಬಿಕೊಂಡಿದೆ. ಮಕ್ಕಳ ಲೋಕಕ್ಕೆ ಇಳಿದು ಅಲ್ಲಿನ ವಿಸ್ಮಯಕ್ಕೆ ತೆರೆದುಕೊಂಡಾಗ ಆಪ್ತವಾದ ಸಾಹಿತ್ಯ ನಿರ್ಮಾಣವಾಗುತ್ತದೆ. ಪಾಟೀಲರದ್ದು ಯಾವಾಗಲೂ ಅಂಥಹದೇ ನಡೆ. ಇಲ್ಲಿ ಪ್ರೀತಿ ಇದೆ, ವಿಸ್ಮಯ ಇದೆ, ಮಕ್ಕಳಂಥಹದೇ ಲವಲವಿಕೆ ಇದೆ. ಧಾರವಾಡದ ಆಡು ಮಾತು, ಒಗಟಿನ ರೀತಿ, ಕಲ್ಪನೆಯ ವಿಸ್ತಾರ, ಚಿತ್ರಕ ನಿರೂಪಣೆ ಈ ಪುಸ್ತಕದ ವಿಶೇಷತೆಯಾಗಿದೆ. ಪಾಟೀಲರು ಪದ್ಯದಷ್ಟೇ ಮುದ್ದಾದ ಚಿತ್ರವನ್ನು ಬರೆಯುತ್ತಾರೆ. ಅವರದು ಸತ್ವಪೂರ್ಣ ರೇಖೆ, ಮಕ್ಕಳ ಸಾಹಿತ್ಯಕ್ಕೆ ಬಹು ಪಳಗಿದ ಕೈ ಅವರದು. ಅವರ ಮುದ್ದಾದ ಚಿತ್ರಗಳು ಪುಸ್ತಕದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ. ಇಂಥಹ ನಮಗೆಲ್ಲ ಆಪ್ತವಾಗುವಂಥಹ ಕೃತಿ ನೀಡಿದ ಪಾಟೀಲರಿಗೆ ಅಭಿನಂದಿಸುತ್ತ ಮಕ್ಕಳನ್ನು ಹಾಗೂ ಮಕ್ಕಳ ಸಾಹಿತ್ಯ ಪ್ರೀತಿಸುವವರೆಲ್ಲ ಓದಲೇ ಬೇಕಾದ ಕೃತಿ ಇದು ಎಂದು ಖುಷಿಯಿಂದ ಹೇಳುತ್ತಿದ್ದೇನೆ. ‘ಹೂ ಅಂದ್ರ ಹೂ’ ಪಟಾಣಿ ಮಕ್ಕಳಿಗೆ ಪುಟಾಣಿ ಪದ್ಯಗಳು ಲೇಖಕರು: ಆನಂದ ವಿ ಪಾಟೀಲ ಪ್ರಕಾಶಕರು: ಅಭಿನವ ಪ್ರಕಾಶನ ಬೆಂಗಳೂರು. ಮುದ್ರಣ:2006 ಕೃತಿ ಪರಿಚಯ - ತಮ್ಮಣ್ಣ ಬೀಗಾರ
