top of page

ಆತಂಕಿತ ಕಾಲದ ಅನುಭವ...

ಹೌದು, ಇದು ಆತಂಕಿತ ಕಾಲ. ಸಾವು, ನೋವು ಈಗ ತೀರ ಅಗ್ಗ. ಸಾವಂತೂ ಸಣ್ಣ ಸುಳಿವು ಕೊಡದೆ ಒಕ್ಕರಿಸಿ ಬಿಡುವ ದುರಿತ ಕಾಲ. ಎರಡುಸಾವಿರದ ಇಪ್ಪತ್ತು ಆಪತ್ತುಗಳ ಹೆತ್ತ ವರ್ಷ. ಇದು ಸಂಶಯದ ಸೋಂಕು ಸೋಕಿದ ಕಾಲ. ಎಲ್ಲವನ್ನೂ, ಎಲ್ಲರನ್ನು ಸಂದೇಹಿಸುವ ಸಂದಿಗ್ಧ ಕಾಲ. ಮನುಷ್ಯ ಮನುಷ್ಯನನ್ನು ನಂಬದ, ಸಂಬಂಧಗಳು ಶೂನ್ಯವೆನಿಸುವ ಕಾಲ. ರಾಜಕೀಯ, ಸಾಮಾಜಿಕ,ಸಾಹಿತ್ಯಿಕ, ಚಲನಚಿತ್ರ, ರಂಗಭೂಮಿ ಕ್ಷೇತ್ರಗಳ ಸಾಧಕರನ್ನು ಬಲಿ ಪಡೆದ ಕಾಲ. ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಬರ್ಬರ ಹತ್ಯಗೈಯುವ ಹೇಯ ಕಾಲ. ಪ್ರಭುತ್ವ ತನ್ನ ಪ್ರತಿಷ್ಠಾಪನೆಗಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಿಕೊಡುವ ಕಾಲ. ಉಳ್ಳದವರ ಮೇಲೆ ಉಳ್ಳವರ ದಬ್ಬಾಳಿಕೆ, ದೌರ್ಜನ್ಯ, ಶೋಷಣೆ ಅವ್ಯಾಹತವಾಗಿ ನಡೆದ ಕಾಲ. ಮಾನವೀಯ ಮೌಲ್ಯಗಳು ಉಸಿರುಗಟ್ಟುವ ಕಾಲ. ಕೋಮುಹಿಂಸೆ, ಕ್ರೌರ್ಯ, ಕೊಲೆ ಸುಲಿಗೆ, ಅನ್ಯಾಯ, ಅಮಾನವೀಯತೆ ವೈಭವೀಕರಣಗೊಳ್ಳುವ ಕಾಲ. ಭಯವನ್ನೇ ಬಂಡವಾಳ ಮಾಡಿಕೊಂಡ ಧರ್ಮಲಂಡರು ಮೆರೆಯುವ ಕಾಲ. ಸಮಾಜದ ಸ್ವಾಸ್ಥ್ಯ ಕದಡುವ ಅಸಹಿಷ್ಣುಗಳ ಅಟ್ಟಹಾಸದ ಕಾಲ. ಟಿ.ಆರ್.ಪಿ.ಗಾಗಿ ಹೊಣೆಗಾರಿಕೆ ಮರೆತ ಮಾಧ್ಯಮಗಳ ಕಾಲ. ಬಡತನ, ಅನಾರೋಗ್ಯವನ್ನು ಜೀವಂತವಾಗಿಡುವ ಹುನ್ನಾರಗಳ ಕಾಲ. ಮಾನವೀಯತೆ ಮರುಪೂರಣಗೊಳ್ಳಬೇಕಾದ, ಸಂಬಂಜಗಳು ಜೀವಪರವಾಗುವ ಅನಿವಾರ್ಯತೆ ಸೃಷ್ಟಿಯಾಗಿರುವ ಕಾಲ. ಈ ಕಾಲದ ಕತೆಯನ್ನು ಏನೆಂದು ಬಣ್ಣಿಸುವುದು....? ಈ ಹಿನ್ನೆಲೆಯಲ್ಲಿಯೇ ಹೇಳಿದ್ದು ಇದು ಆತಂಕಿತ ಕಾಲ ಎಂದು...! ಈ ಆತಂಕದ ಭಾಗವಾಗಿ ಆಸ್ಪತ್ರೆಗಳನ್ನೂ, ಅಲ್ಲಿ ನಡೆಯುವ ಮನಃಕಲಕುವ ಸಂಗತಿಗಳನ್ನು ಗಮನಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನನ್ನದೊಂದು ಅನುಭವ ಹೇಳಿಕೊಳ್ಳಬೇಕೆನಿಸುತ್ತದೆ... ಆಸ್ಪತ್ರೆ ಅಂದ್ರೆ ಅಕ್ಷರಶಃ ಆತಂಕ. ಬಹುತೇಕ ನೋವು, ಸಾವು, ಯಾತನೆ, ಹಿಂಸೆ, ಹತಾಶೆ, ನಿರಾಶೆ, ಸಂಕಟ, ಎಲ್ಲೊ ಸ್ವಲ್ಪ ಬದುಕುಳಿಯುವ ಭರವಸೆ, ಅಲ್ಪ ನಿರಾಳತೆ ಹೀಗೆ ಸಂಕೀರ್ಣ ಭಾವೋದ್ದೇಪಿತ ವೇದಕ ಸಂಗತಿಗಳ ಕೇಂದ್ರಸ್ಥಳವದು. ನವಜಾತ ಶಿಶುಗಳೂ ಸೇರಿದಂತೆ ವಯೋವೃದ್ಧರವರೆಗೂ ನಾನಾ ಖಾಯಿಲೆಗಳಿಂದ ಬಳಲುವ ರೋಗಿಗಳು ಅಲ್ಲಿ ಜಮಾವಣೆ ಗೊಂಡಿರುತ್ತಾರೆ. ರೋಗಿಗಳು ತಂತಮ್ಮ ನೋವಿಗೆ ಬಾಧ್ಯಸ್ಥರು‌. ಹಾಗಂತ ಅವರ ಬಗೆಗಿನ ನಿರ್ಲಕ್ಷ್ಯದ ಮಾತಲ್ಲವಿದು. ಅವರಿಗಿಂತಲೂ ಅವರ ಜೊತೆಗಿರುವ ಸಂಬಂಧಿಕರ ಆತಂಕವಿದೆಯಲ್ಲ, ಅದು ಯಾರಿಗೂ ಬೇಡದ, ಹೇಳತೀರದ, ಒಂದುಬಗೆಯ ಸಂಕಟಮಯ ಮನೋವ್ಯಾಕುಲ. ಹೇಳಿಕೇಳಿ ಇದು ಕೊರೊನಾ ಕಂಟಕದ‌ ಕಾಲ. ಈಗ ಅಂತರ ಅವಶ್ಯ. ಎಲ್ಲವೂ, ಎಲ್ಲರನ್ನೂ ಅನುಮಾನಿಸಿ ಅಂತರ ಕಾಪಾಡಿಕೊಳ್ಳುವುದು ಅಪೇಕ್ಷಿಣೀಯ, ಅನಿವಾರ್ಯವೂ...! ಈಗ ಸಂಬಂಧ, ಸಂಬಂಧಿಕರು ಯಾರನ್ನೂ ಸಮೀಪ ಬಿಟ್ಟುಕೊಳ್ಳದ, ನಮಗೆ ನಾವೇ ನಿರ್ಬಂಧ ಹೇರಿಕೊಳ್ಳುವ ಸಂದಿಗ್ಧ ಸನ್ನಿವೇಶ. ಸಂಬಂಧಗಳನ್ನು ಸಂದೇಹಿಸಿಯೂ ವಿಶ್ವಾಸ ಬಲಪಡಿಸಿಕೊಳ್ಳುವ ವಿಚಿತ್ರ ಸಂದರ್ಭದಲ್ಲಿ ನಾವೆಲ್ಲ ಇದ್ದೇವೆ. ಇಲ್ಲಿ ಎಲ್ಲರೂ ನಮ್ಮವರು, ಇಲ್ಲಿ ಯಾರೂ ನಮ್ಮವರಲ್ಲ ಎಂಬ ದ್ವಂದ್ವ ಸೃಷ್ಟಿಯಾಗಿದೆ. ಈ ನಡುವೆ ಸಂಬಂಧಗಳ ಗಟ್ಟಿತನ ಪರೀಕ್ಷಿಸುವ, ಕೆಲ ಸಂಬಂಧಗಳ ಪೊಳ್ಳುತನ ಬಯಲಾಗುವ ಕಾಲವೂ ಇದೇ ಆಗಿರುವುದೂ ನಿಜ. ಇಂಥ ಸನ್ನಿವೇಶದಲ್ಲಿ ರೋಗಿಗಳನ್ನು, ಅವರ ಸಂಬಂಧಿಕರನ್ನು ನೋಡುವ ದೃಷ್ಟಿಕೋನವೇ ಬದಲಾಗಿರುವುದಂತೂ ಸ್ಪಷ್ಟ. ನಾನು ಈ ಮೊದಲೂ ಆಸ್ಪತ್ರೆಯನ್ನು ಕಂಡಿದ್ದೇನೆ, ಇದ್ದೂ ಬಂದಿದ್ದೇನೆ. ಈ ಬಾರಿ ಮಾತ್ರ ತೀವ್ರ ತಲ್ಲಣದ ಅನುಭವ ಆಯಿತು. ಕಾರಣ, ಕೊರೊನಾ. ಊಟ ತಿಂಡಿ ವಿನಿಮಯ, ಪಕ್ಕದ ಬೆಡ್ ನಲ್ಲಿರುವ ರೋಗಿಗಳು, ಅವರ ಜೀವನದ ಕಥೆಗಳಗಳನ್ನು ವ್ಯವಧಾನದಿಂದ ಕೇಳಿಸಿಕೊಳ್ಳುವ, ಪರಸ್ಪರ ಸಾಂತ್ವನ ಹೇಳುವ ಸೌಜನ್ಯ ತೋರುವ ವಾತಾವರಣ ಇರುತ್ತಿತ್ತು. ಈ ಬಾರಿ ಅದು ಸಾಧ್ಯವಾಗಲಿಲ್ಲ. ಅದು ಕಾಣಿಸಲಿಲ್ಲ. ಎಲ್ಲರೂ ಪರಸ್ಪರ ಸಂದೇಹಿಗಳೇ. ಮನಸ್ಸಿಗೆ ಏನೋ ಒಂಥರಾ ಹೇಳಿಕೊಳ್ಳದ ಕಳವಳ. ಹಾಗೇ ನೋಡಿದರೆ ಆರೋಗ್ಯ ಎಲ್ಲರಿಗೂ ಬೇಕಾದ ಭಾಗ್ಯ. ಖಾಯಿಲೆಗಳಿಗೆ ಬಡವ ಶ್ರೀಮಂತ, ಆಸ್ತಿ ಅಂತಸ್ತು, ಬಾಲಕ ಮುದುಕ, ಗಂಡು ಹೆಣ್ಣು ಎಂಬ ಯಾವ ಭೇದವೂ ಇಲ್ಲ. ಅನಿರೀಕ್ಷಿತವಾಗಿ ಅಡರಿಕೊಳ್ಳುವ ನಿರ್ದಯಿ ಅವು.ಕೊರೊನಾದಂಥ ಸಂಕಷ್ಟದ ಈ ದಿನಗಳಲ್ಲಿ ಕೆಲಸ ಕಳೆದುಕೊಂಡ ನಿರುದ್ಯೋಗಿಗಳಿಗೆ, ಬಡವರಿಗೆ ಹೊಟ್ಟೆ ತುಂಬಿಸಿಕೊಳ್ಳೋದೇ ಕಷ್ಟವಾಗಿದೆ. ಇಂಥ ವಿಷಮ ಗಳಿಗೆಯಲ್ಲಿ ಖಾಯಿಲೆಗಳು ಕಾಣಿಸಿಕೊಂಡರೆ ವಿಷವೇ ಗತಿ. ಈ ಸ್ಥಿತಿ ದೇವರಿಗೇ ಪ್ರೀತಿ. ಬಡವರಿಗೆ ಮಾತ್ರ ಖಾಯಿಲೆಗಳು ಬರಲೇಬಾರದು. ಬಂದರೆ ಅಂಥ ದೌರ್ಭಾಗ್ಯಕ್ಕೆ ಆ ದೇವರೇ ಹೊಣೆ! ಯಾವುದೇ ಖಾಯಿಲೆ ಸಣ್ಣದೊ, ದೊಡ್ಡದೊ ಅದು ಉಂಟು ಮಾಡುವ ತಲ್ಲಣ, ತಳಮಳ ದೊಡ್ಡದು. ಖಾಯಿಲೆಗಳು ಯಾವುದೇ ಮುನ್ಸೂಚನೆ ನೀಡದೆ ಬಂದುಬಿಡುತ್ತವೆ. ಸೂಚನೆ ಕೊಟ್ಟು ಬಂದರೆ ಅವು ಖಾಯಿಲೆಗಳೇ ಅನಿಸಿಕೊಳ್ಳುವುದಿಲ್ಲವೇನೋ! ಬರಬಾರದ ವಯಸ್ಸಿನಲ್ಲಿ ಬರಬಾರದ ಖಾಯಿಲೆಗಳು ಬಂದರಂತೂ ಅದು ಸಹಿಸಲಸಾಧ್ಯ ಒಳಬೇಗುದಿ. ವೈದ್ಯರು ಪರೀಕ್ಷೆ ಮಾಡಿದಾಗೊಮ್ಮೆ ರೋಗಗ್ರಸ್ತರ ಜೊತೆಗಿನವರ ನಿರೀಕ್ಷೆಗಳು ಹೆಚ್ಚಾಗುತ್ತವೆ ಅಲ್ಲದೇ, ಆತಂಕಗಳೂ ಉಲ್ಬಣಗೊಳ್ಳುತ್ತವೆ. ದೊಡ್ಡವರಾದರೆ ಬಾಧೆಯನ್ನು ತಾಳಿಕೊಂಡಾರು, ಹೇಳಿಕೊಂಡಾರು; ನೋವು ಸಹಿಸಿಕೊಂಡಾರು. ಆದರೆ ಚಿಕ್ಕಮಕ್ಕಳು ಹಾಗಲ್ಲ, ಅವರಿಗೆ ನೋವೆಂದರೇನೆಂಬುದು ಗೊತ್ತಿದ್ದೊ, ಗೊತ್ತಿರದೆಯೊ ಅನುಭವಿಸಬೇಕಷ್ಟೇ! ಅನುಭವಿಸುತ್ತವಷ್ಟೇ!! ಆ ಮಕ್ಕಳು ಪಡುವ ಸಂಕಟ, ಆ ಪುಟ್ಟ ಕಂದಮ್ಮಗಳ ಕಣ್ಣೀರು ನೋಡದೇ ತಂದೆತಾಯಿಗಳು ಒಳಗೊಳಗೇ ನೋಯುತ್ತಾರೆ. ಅದು ತೋರಿಸಿಕೊಳ್ಳದ ಒಳಯಾತನೆ. ಚಿಕ್ಕಮಕ್ಕಳ ವಿಭಾಗದಲ್ಲಂತೂ 'ಅಯ್ಯೋ ದೇವರೇ ನೀನೆಷ್ಟು ಕ್ರೂರಿ ಎನ್ನದೇ ವಿಧಿಯಿಲ್ಲ. ಅಷ್ಟೊಂದು ನೋವ ನದಿ ನಮ್ಮೊಳಗೇ ಹರಿದುಬಿಡುವ ಅಸಾಧ್ಯ ಸಂಕಟ ಅಲ್ಲಿರುತ್ತದೆ. ಮಗಳು ಸಿಂಚನಾಳಿಗೆ ಕಫ, ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿಕೊಂಡು ತೀವ್ರ ನೋವು ಅನುಭವಿಸಿದಳು. ಹತ್ತು ಹೆಜ್ಜೆ ನಡೆದರೆ ಸಾಕು ಸುಸ್ತು ಅಂತಿದ್ದಳು. ಅವಳನ್ನು ನೋಡಿದರೆ ನಮಗೇ ಸುಸ್ತಾಯಿತು. ಓಡಾಡಿಕೊಂಡು, ಖುಷಿಖುಷಿಯಾಗಿ ಆಡಿಕೊಂಡು ಇರಬೇಕಾದ ಅವಳು ಹೀಗೇ ಅಸಾಧ್ಯ ನೋವು ಅನುಭವಿಸುವಾಗ ನಮಗೆ ಝಂಗಾಬಲವೇ ಉಡುಗಿಹೋಯಿತು. ಮಕ್ಕಳು ಹೀಗೇ ಬಾಧೆಗೆ ತುತ್ತಾಗಿ ಅಳುತ್ತಿದ್ದರೆ ಹೆತ್ತವರ ಕರುಳು ಕಿವುಚಿದಂತಾಗುತ್ತದೆ.ಕಣ್ಣು ಒದ್ದೆಯಾಗುತ್ತವೆ. ಅಸ್ತಿತ್ವವೇ ಅಲುಗಾಡಿದಂತಾಗುತ್ತದೆ. ಮಕ್ಕಳೇ ದೇವರು ಅಂತಾರೆ. ದೇವರೇ ಹೀಗೆ ಅತ್ತರೆ ಯಾರನ್ನು ಬೇಡಿಕೊಳ್ಳುವುದು....? ಜಗತ್ತಿನ ಎಲ್ಲ ದೇವರ ಸಂತತಿಯೂ ಸಂತೋಷವಾಗಿ, ಆರೋಗ್ಯದಿಂದ ಇರುವಂತಾಗಲಿ. ಈ ಜಗತ್ತು ನಂದನವನವಾಗಲಿ. ಈಗ ಮಗಳು ಸಿಂಚನ ಗುಣಮುಖಳಾಗಿದ್ದಾಳೆ. ಅವಳ ಮುಖದಲ್ಲಿ ನಗು‌ ಮೂಡಿದೆ.‌ ಸದ್ಯ ನಮಗೆ ನಿರಾಳ ಎನಿಸಿದೆ. ನಿಮ್ಮೆಲ್ಲರ ಹಾರೈಕೆ, ಗುರು ಹಿರಿಯರ ಆಶೀರ್ವಾದ, ದೇವರ ಅನುಗ್ರಹದಿಂದ ಇದು ಸಾಧ್ಯವಾಗಿದೆ ಎಂದು ಭಾವಿಸುವೆ. ಕಳೆದ ಮೂರು ದಿನಗಳಿಂದ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಮಗಳು ಇಂದು ಡಿಸ್ಚಾರ್ಜ್ ಆಗಿದ್ದಾಳೆ. ತಜ್ಞ ವೈದ್ಯರಾದ ಡಾ. ರಾಘವೇಂದ್ರ ವನಕಿ ಅವರು ಅತ್ಯಂತ ಕಾಳಜಿ ವಹಿಸಿ ನೋಡಿಕೊಂಡಿದ್ದಾರೆ. ಅವರ ತಜ್ಞತೆಗೆ ಶರಣು. ಅನಿರೀಕ್ಷಿತ, ಅಕಾಲಿಕ, ಆಪತ್ತು ಅನಾರೋಗ್ಯ ಅಡಿ ಇಡುತ್ತಿರುವ ಇದು ನಿಜಕ್ಕೂ ಆತಂಕಿತಕಾಲ. ಈ ಕಾಲವನ್ನು ಧೈರ್ಯ, ಸಂಯಮದಿಂದಲೇ ಎದುರಿಸಬೇಕು. ಮತ್ತೊಂದು ಸುಭಿಕ್ಷ ಕಾಲ ನಮಗಾಗಿ ಕಾದಿರುತ್ತದೆ ಎಂಬ ನಂಬಿಕೆ, ಭರವಸೆಯಿಂದಲೇ ಕಾಲದ ಜೊತೆಗೆ ಹೆಜ್ಜೆ ಹಾಕಲೇಬೇಕು. ಡಾ. ಸಂಗಮೇಶ ಎಸ್. ಗಣಿ 9743171324

ಆತಂಕಿತ ಕಾಲದ ಅನುಭವ...
bottom of page