ಅ.ನ.ಕೃಷ್ಣರಾಯರು ೨
"೧೯೫೦-೬೦ ರ ದಶಕಗಳಲ್ಲಿ ಕೃಷ್ಣರಾಯರು ಬೆಂಗಳೂರಿನ ಶಕ್ತಿಕೇಂದ್ರವೇ ಆಗಿದ್ದರು ಮತ್ತು ಸಾಹಿತ್ಯ ಕ್ಷೇತ್ರದ ಸಾರ್ವಭೌಮರೂ ಆಗಿದ್ದರು" ಎಂದು ಡಾ. ಎ. ಎಸ್. ವೇಣುಗೋಪಾಲರಾವ್ ಅವರು ಹೇಳಿರುವದರಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಅನಕೃ ಕೇವಲ ಕಾದಂಬರಿ ಬರೆದವರಲ್ಲ. ಕನ್ನಡ ನಾಡುನುಡಿ ಕಲೆ ಸಂಸ್ಕೃತಿ ಗಳ ಭವ್ಯ ಪರಂಪರೆಯನ್ನು ಪರಿಚಯಿಸುವ ಅನೇಕ ಮಹತ್ವದ ಗ್ರಂಥಗಳು ಅವರಿಂದ ರಚನೆಯಾಗಿವೆ. ಅಷ್ಟೇ ಅಲ್ಲ, ವಿಜಯನಗರ ಸಾಮ್ರಾಜ್ಯದ ಕುರಿತು ಅವರು ಬರೆದ ಕಾದಂಬರಿ ಮಾಲಿಕೆ ಕನ್ನಡಿಗರ ಮೈಮನ ರೋಮಾಂಚನಗೊಳಿಸುವಂತಹದು. ಅವರ ಅಧ್ಯಯನದ ಆಳ ಅಗಲಗಳನ್ನು ಅಳತೆ ಮಾಡುವದೇ ಕಷ್ಟವೆಂಬಷ್ಟು ಅವರ ಕೃತಿಗಳು ವೈವಿಧ್ಯತೆ ಮತ್ತು ವಿಷಯ ವ್ಯಾಪ್ತಿಯಿಂದ ಕೂಡಿವೆ. ಒಂದು ಬೇಸರದ ಸಂಗತಿಯೆಂದರೆ ಅವರು ರಾಮಾಯಣವನ್ನು ೧೫ ಸಂಪುಟಗಳಲ್ಲಿ ಕಾದಂಬರಿ ರೂಪದಲ್ಲಿ ಬರೆಯಬೇಕೆಂದು ಯೋಚಿಸಿದ್ದು ಕಾರ್ಯರೂಪಕ್ಕೆ ತರಲು ಅವರಿಗೆ ಸಾಧ್ಯವಾಗದೇ ಹೋದದ್ದು. ಹಾಗೆಯೇ ಆಚಾರ್ಯತ್ರಯರ ಕುರಿತು ಸಹ ಕಾದಂಬರಿಗಳನ್ನು ಬರೆಯಬೇಕೆಂದಿದ್ದರಂತೆ. ಬಹುಶಃ ಇನ್ನು ಹತ್ತು ವರ್ಷ ಅವರು ಬದುಕಿದ್ದರೆ ಕನ್ನಡಿಗರಿಗೆ ಆ ಅಪೂರ್ವ ಕೃತಿಗಳು ದೊರಕುತ್ತಿದ್ದವೇನೊ. ಅಷ್ಟು ಬರೆದರೂ ಅವರಿಗೆ ತೃಪ್ತಿ ಇರಲಿಲ್ಲ. " ನನ್ನ ಪೂರ್ಣಾನುಭವವನ್ನು ಅಭಿವ್ಯಕ್ತಗೊಳಿಸುವ ನನ್ನ ಅತ್ಯುತ್ತಮ ಕೃತಿ ಇನ್ನೂ ಹೊರಬರಬೇಕಾಗಿದೆ" ಎಂಬ ಅವರ ಮಾತು ಅವರ ಆ ಅತೃಪ್ತಿಯನ್ನು ಸೂಚಿಸುತ್ತದೆ. ಬೆಂಗಳೂರಿನಲ್ಲಿ ತಮಿಳರು ಕನ್ನಡಿಗರ ಮೇಲಾ ದಬ್ಬಾಳಿಕೆ ನಡೆಸುವದನ್ನು ಅವರೆಂದೂ ಸಹಿಸುತ್ತಿರಲಿಲ್ಲ. ಕನ್ನಡಿಗರು ಎಲ್ಲ ಕ್ಷೇತ್ರಗಳಲ್ಲೂ ಮೇಲುಗೈ ಸಾಧಿಸಬೇಕೆಂದು ಬಯಸುತ್ತಿದ್ದ ಅವರು ತಮ್ಮ ೬೪ ವರ್ಷಗಳ ಜೀವನಾವಧಿಯಲ್ಲಿ ತಮ್ಮ ಕೈಯಲ್ಲಾದ ಎಲ್ಲ ಕೆಲಸವನ್ನೂ ಮಾಡಿದರು. ಕನ್ನಡಿಗರನ್ನು ಎಚ್ಚರಿಸಿದರು. ಸಾಹಿತಿಯಾಗಿ, ಹೋರಾಟಗಾರರಾಗಿ, ಕಲಾಪೋಷಕರಾಗಿ, ಅಸಾಧಾರಣ ವಾಗ್ಮಿಗಳಾಗಿ , ಕನ್ನಡದ ಹಿತಚಿಂತಕರಾಗಿ ಕೃಷ್ಣರಾಯರ ಬದುಕು ಕನ್ನಡದೊಡನೆ ಬೆರೆತುಹೋಗಿತ್ತು. ಆದ್ದರಿಂದಲೇ ಕನ್ನಡ ಮತ್ತು ಕೃಷ್ಣರಾಯರೆಂಬ ಶಬ್ದಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ತನ್ನ ಜೀವಮಾನದ ಅವಧಿಯಲ್ಲಿ ಎಷ್ಟೊಂದು ಕೆಲಸ ಮಾಡಬಹುದು ಎನ್ನುವದನ್ನು ಅವರು ತಮ್ಮ ಜೀವನ ಸಾಧನೆಯಿಂದಲೇ ತೋರಿಸಿಕೊಟ್ಟರು. ಅವರ ಸಾಧನೆ ಏಕೆ ಮಹತ್ವ ಪಡೆದುಕೊಳ್ಳುತ್ತದೆಂದರೆ ಅವರು ಉನ್ನತ ಶಿಕ್ಷಣ ಪಡೆದವರಲ್ಲ. ಉನ್ನತ ಹುದ್ದೆಯಲ್ಲಿದ್ದವರಲ್ಲ. ಆರ್ಥಿಕವಾಗಿ ಸಿರಿವಂತರ ಸಾಲಿಗೆ ಸೇರಿದವರಲ್ಲ. ಬರೆದು ಬದುಕುವ ಛಲ ತೋರಿದವರು. ಅವರೆಂದೂ ಕೇವಲ ತಮ್ಮೊಬ್ಬರ ಬಗ್ಗೆ ಯೋಚಿಸಿದವರಲ್ಲ. ಅನೇಕ ಸಾಹಿತಿ ಕಲಾವಿದರಿಗೆ ಬದುಕು ಕೊಟ್ಟವರು. ಬದುಕಿನ ದಾರಿ ತೋರಿಸಿದವರು. ಆದ್ದರಿಂದಲೇ ಅ. ನ. ಕೃಷ್ಣರಾಯರೆಂದರೆ ಕನ್ನಡದ ಅಮರ ಚೇತನ. ನಿತ್ಯಸ್ಮರಣಾರ್ಹ ಮಹಾಸಾಧಕ. ! - ಎಲ್. ಎಸ್. ಶಾಸ್ತ್ರಿ, ಬೆಳಗಾವಿ