top of page
ಅವಳ ಬಟ್ಟೆ
************ ಅರಮನೆ ಸಿರಿಯ ನಿರಾಕರಿಸಿ ನಿರಾಭರಣೆಯಾಗಲರಿಯೆನಯ್ಯ ಕೇಶ ಕದಡಿ ಕಲುಷಿತ ಮತಿಗಳಿಗೆ ನಿರ್ವಾಣವ ಮರೆಮಾಚಲು ನಾನರಿಯೆನಯ್ಯ ಸಾವ ಕೆಡುವ ಲೋಕದ ಗಂಡರುಗಳ ಮೀರುವ ಗುಂಡಿಗೆಯಿಲ್ಲಯ್ಯ ಮನಸಿಜನಿಗೆ ತನುಮನವೀಯದೆ ಲಿಂಗಭಾವವ ಹೊಂದಲು ನಾನರಿಯೆನಯ್ಯ ವರಲಿಂಗಕೆ ಮದುವಣಗಿತ್ತಿಯಾಗಿ ಕರತಲಸುಖಪಡುವ ಹಾದಿಯಿಲ್ಲಯ್ಯ ಕಂದುವ ಮಿಂಚುವ ಕಾಯಭಾವವ ತೊರೆದು ಹರನ ವರಿಸುವುದ ನಾನರಿಯೆನಯ್ಯ ಒಳಗಣ ಫಲವ ಫಲಿತವಾಗಿಸಿ ಸಚ್ಚಿದಾನಂದಾತ್ಮಕ ರಸವ ಒಪ್ಪಿಸಲರಿಯೆನಯ್ಯ ಮಲ್ಲಿಕಾರ್ಜುನನ ಮಕರಂದದಲ್ಲಿ ಅಂತರ್ಗತವಾಗುವ ಅಕ್ಕನ ಪರಿಯ ನಾನರಿಯೆನಯ್ಯ ಅವಳುಳಿಸಿ ಹೋದ ಬಟ್ಟೆಯ ಸುತ್ತಿ ಮೆರೆವ ಮೂಢಮತಿ ನಾನಯ್ಯ ಅವಳು ತೋರಿದ ಬಟ್ಟೆಯ ಅನುಸರಿಸಿ ಕರಗುವ ದಾರಿ ತೋರೋ ಅಂತರಾಧೀಶಾ. ಕವಿತಾ ಹೆಗಡೆ ಅಭಯಂ
bottom of page