ಅಮ್ಮನ ಕೈತುತ್ತು
ಸೊಂಟದ ಮೇಲೆ ಮಗುವ ಕುಳಿಸಿ ಆಕೆ ಸಾಕಷ್ಟು ಪಾತ್ರಕ್ಕೆ ಜೀವತುಂಬುತ್ತಿದ್ದಾಳೆ ಗಾಯಕಿ, ನರ್ತಕಿ, ನಿರೂಪಕಿ ಎಲ್ಲವೂ ಏಕಪಾತ್ರಾಭಿನಯದಂತೆ ಜಗವೇ ರಂಗಮಂದಿರವಾಗಿ ಮಗು ಅದರ ಪ್ರೇಕ್ಷಕನಾಗಿ....... ಮಗುವಿಗೆ ಉಣ್ಣಿಸಲೆಂದೇ ಕಾಯ್ದಿಟ್ಟ ತಾಟನು ಮಗು ನಿದ್ದೆ ಹೋದಾಗ ಮುದ್ದು ಮಾಡುವವಳು ಇವಳು ಕಣ್ಣಿಗೆ ಕಾಡಿಗೆ ಹಚ್ಚಿದಷ್ಟೇ ನಯವಾಗಿ ಹಾಲು ಅನ್ನವ ಕಲಿಸುವಾಕೆ ಅವಳು..... ಒಂದೊಂದು ತುತ್ತಿಗೂ ಅಂಗಳದಲ್ಲಿ ಇವಳೊಬ್ಬಳದೇ ಸಾಂಸ್ಕೃತಿಕ ಕಾರ್ಯಕ್ರಮ ಒಂದೊಂದು ತುತ್ತು ಖಾಲಿಯಾದರೂ ಇವಳಿಗೆ ಸಕಲ ಸಂಪತ್ತು ಪ್ರಾಪ್ತಿಯಾದಂತ ಭಾಸ...... ಉಣ್ಣುತ್ತಲೇ ಮಗು ತಾಯಿಯ ಮುಖಕ್ಕೆ ಉಗುಳಿದರೂ ಎಡಗೈಯಲ್ಲೇ ಒರೆಸಿಕೊಳ್ಳುತ್ತಾ ನಸುನಗುತಾ ಮತ್ತೆ ತುತ್ತಿಡುತಿದ್ದಾಳೆ ಒಂದು ಊಟದ ಕಥೆಯಲ್ಲ ವರ್ಷಗಳ ತಪಸ್ಸಿದು ತಾಳ್ಮೆಯೆಂಬುದು ತಾಯ ಪರ್ಯಾಯವೆಂಬಂತೆ..... ತುತ್ತನುಣಿಸಲು ಹೈರಾಣಾಗುವ ತಾಯೆದರು ಅನಾಥ ಮಗುವೊಂದು ಬಾಯ್ತೆರೆದಂತೆ ಭಾಸವಾಗಿದೆ ಗಂಡು ತಾಯಿಸ್ಥಾನ ತುಂಬಬಹುದು ಹೆಣ್ಣು ಕರುಳಿದ್ದರೆ, ತಾಯಂತೆ ಕೈ ತುತ್ತ ಉಣಿಸಲಾಗದೆನೋ.... @ ಮೋಹನ್ ಗೌಡ ಹೆಗ್ರೆ