top of page

ಅಪ್ಪನ ಕನಸು

ಸಮುದ್ರ ತೀರದಿ ದೂರದಿ ನೋಡುತ ಮನಸಲಿ ಮೂಡಿತು ಥರಥರ ಯೋಚನೆ ಕಳೆದಿಹ ಅಪ್ಪನೇ ಬಂದಿಹನೆನ್ನುತ ಗುಡಿಯಲಿ ಮಾಡಿದೆ ದೇವರಿಗೊಂದನೆ. ಕಡಲಿಗೆ ಹೇಳಿದೆ ನೀನಾಗು ಶಾಂತ ಆಯಾಸ ಆದೀತು ಬರುತಿಹ ಒಬ್ಬನೆ. ಹೃದಯದ ಗಿಟಾರ ತಂತಿಯ ನುಡಿಸುತ ಸ್ವಾಗತ ಕೋರಲು ಕುಣಿದೆನು ಚಂಗನೆ. ಅರಿತನೋ ದೇವ ನನ ಮನದಿಂಗಿತ ಎನ್ನುತ ಮಾಡಿದೆ ಹರುಷದಿ ಚಿಂತನೆ ಬಂದಿತು ಸ್ವರ್ಗವೇ ಧರೆಗಿಳಿದೆನ್ನುತ ನವ ವಧುವಂತೆ ಶ್ರಂಗರಿಸಿದೆ ಮನೆ. ಬಂದಿಹ ಅಪ್ಪನ ಕೈ ಹಿಡಿದೆತ್ತಲು ಕರೆದಳು ತಾಯಿ ಬೆಳಗಾಯ್ತು ಮಗನೆ ಕಂಡಿದ್ದೆಲ್ಲವೂ ಕನಸುಗಳೆನ್ನುತ ಕಣ್ಣೀರ ಒರೆಸುತ ಕುಳಿತೆನು ಸುಮ್ಮನೆ. - ಅರುಣ ಎಂ ಗೌಡ, ಜೂಗ ಅರುಣ ಎಮ್. ಗೌಡ. ಇವರು ಅಂಕೋಲಾ ತಾಲೂಕಿನ ಜೂಗ ಗ್ರಾಮದವರು. ಪ್ರಸ್ತುತ ಖಾಸಗಿ ಕಂಪನಿಯಲ್ಲಿ ಉದ್ಯೊಗಿಯಾಗಿರುವ ಇವರು ಬಿಡುವಿನ ವೇಳೆಯಲ್ಲಿ ಕೃಷಿ ಮತ್ತು ಹೊಲಿಗೆ ವೃತ್ತಿಗಳಲ್ಲಿ ನಿರತರಾಗಿದ್ದಾರೆ. ಚುಟುಕು, ಕವನ ರಚನೆಯಲ್ಲಿ ಅಸಕ್ತರಾಗಿರುವ ಅರುಣರು ಸಾರ್ವಜನಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಮೊದಲ ಕವನ ಸಂಕಲನ ‘ಗುಮಟೆ ಪಾಂಗ್’ 2019 ರಲ್ಲಿ ಬಿಡುಗಡೆಗೊಂಡಿದೆ. ಇವರು ಭಾಗವಹಿಸಿದ ‘ ಮರೆಯಾದ ಸ್ನೇಹ’ ವೆಂಬ ಕಿರುಚಿತ್ರ ಯೂ ಟ್ಯೂಬ್‍ ನಲ್ಲಿ ಲಭ್ಯ. -ಸಂಪಾದಕ

ಅಪ್ಪನ ಕನಸು

©Alochane.com 

bottom of page