top of page

ಅನಾಯಾಸೇನ ಮರಣಂ ..........

[ಧರ್ಮೇಚ , ಅರ್ಥೇಚ , ಕಾಮೇಚ, ಮೋಕ್ಷೇಚ ನಾತಿ ಚರಾಮಿ ಎಂದು ವಿವಾಹದ ಹೊತ್ತಿನಲ್ಲಿ ವರನು ವಧುವಿನ ಎದುರು ಪ್ರತಿಜ್ಜೆಗೈಯುವ ಸಂಪ್ರದಾಯ ನಮ್ಮ ಸಂಸ್ಕೃತಿಯಲ್ಲಿ ಕಾಣುತ್ತೇವೆ. ಅಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಲ್ಲಿ ಪತಿ ತಾನು ತನ್ನ ಹೆಂಡತಿಯ ಸದಾ ಜೊತೆ ಇರುತ್ತೇನೆ ಎಂದು ಸಾರುವ ಆ ಶ್ಲೋಕ ಕೇವಲ ಬಾಯಿಪಠಣವಾಗದೆ ವೈವಾಹಿಕ ಬದುಕಿನ ಸಂಬಂಧದ ಮೂಲಮಂತ್ರ ದಂತಿದೆ. ಧರ್ಮ, ಅರ್ಥ, ಕಾಮಗಳಲ್ಲಿ ಪತಿ ಪತ್ನಿಯೊಂದಿಗೆ ಸಹಜೀವಿಸಬಲ್ಲ. ಆದರೆ ಮೋಕ್ಷದಲ್ಲಿಯೂ ಆತ ಸಹಕರಿಸುತ್ತಾನೆಯೇ ಎಂಬುದು ತಾತ್ವಿಕತೆಯ ಪ್ರಶ್ನೆಯಾಗಬಲ್ಲದೆ ವಿನಃ ವಾಸ್ತವಿಕವಾಗಿ ಋಜು ಗೊಳಿಸುವುದು ಕಷ್ಟವೇ ಸರಿ. ಆದರೆ ಕೆಲವು ವರ್ಷಗಳ ಹಿಂದೆ ಕನ್ನಡದ ಹಿರಿಯ ಸಾಹಿತಿ ಮತ್ತು ವಿಮರ್ಶಕ ಕೀರ್ತಿನಾಥ ಕುರತ್ಕೋಟಿಯವರು ಪತ್ನಿ ಅಗಲಿದ ಮೂರು ತಾಸೀನಲ್ಲಿಯೇ ಅವಳನ್ನು ಅನುಸರಿಸಿ ಇಹಲೋಕ ತ್ಯಜಿಸಿದ್ದು ಇಂದು ಇತಿಹಾಸದ ಪನ್ನದಲ್ಲಿ ಅಡಗಿದೆ. ಅಂತಹದೆ ಅಪರೂಪದ ಇನ್ನೊಂದು ಘಟನೆಯನ್ನು ಲೇಖಕ ಸುರೇಶ ಹೆಗಡೆ ಈ ಬರಹದ ಮೂಲಕ ತಮ್ಮ ಮುಂದಿಡುತ್ತಿದ್ದಾರೆ - ಸಂಪಾದಕ] ಈ ಚಿತ್ರ ನೋಡಿ ನಿಮಗೇನನ್ನಿಸುತ್ತದೆ? ಇದು ಯಾರು ಏನೆಲ್ಲಾ ಅಪ್ರಸ್ತುತ. ಆದರೂ ಇರಲಿ, ಹೇಳಿಬಿಡುವಾ. ಈ ಮಹಾನುಭಾವರು ನನ್ನ ಅನೇಕ ಮಿತ್ರರಲ್ಲಿ ಒಬ್ಬರು. ನನ್ನ ಜೊತೆ ಕೆಲಸ ಮಾಡಿದ್ದರು. ಮನೆ, ಮಗ ಮಗಳು ಸೊಸೆ ಮೊಮ್ಮಕ್ಕಳನ್ನು ಹೊಂದಿದ ಸಂತೃಪ್ತ ಬದುಕು ಈ ದಂಪತಿಗಳದ್ದು. ಕಳೆದ ತಿಂಗಳು ವೈವಾಹಿಕ ಜೀವನದ ನಲವತ್ತೈದು ವಸಂತಗಳನ್ನು ಸಂಭ್ರಮಿಸಿ ಹಿಗ್ಗಿದ ಜೋಡಿ ಇದು . ವಯೋ ಸಾಮಾನ್ಯ ಸಕ್ಕರೆ ಕಾಯಿಲೆ ಅಥವಾ ರಕ್ತದೊತ್ತಡ ಕಂಡವರಲ್ಲ. ಮೊನ್ನೆ ಸಂಜೆ ಯಜಮಾನರ ಹೃದಯ ಇದ್ದಕ್ಕಿದ್ದಂತೆ ಕೈಕೊಟ್ಟು ಲೋಕ ಯಾತ್ರೆ ಮುಗಿಸಿಕೊಂಡರು. ವಿಷಯ ಅದಲ್ಲ. ಹುಟ್ಟಿದವನೊಬ್ಬ ಒಂದು ದಿನ ಹೋಗಲೇಬೇಕು. ಅವರ ಬಳಿಯೆಲ್ಲರೂ ಸೇರಿ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದಾಗ ರಾತ್ರಿ ಒಂಭತ್ತು ಗಂಟೆ. ಅವರ ಪತ್ನಿಯೂ ಪತಿಯನ್ನು ಅನುಸರಿಸಿದ್ದರು. ಈಗ ಈ ಮೃತ ದಂಪತಿಗಳ ಭಾವಚಿತ್ರ ಸ್ವಲ್ಪ ನೋಡಿ ಹೇಳಿ. ಇಲ್ಲೊಂದು ವಿನಮ್ರ, ನಿಷ್ಕಪಟ, ನಿರ್ಭಾವ ಆಸರೆಯ ಕೋರಿಕೆಯಿಲ್ಲವಾ? " ನೀವೆಲ್ಲಿದ್ದರೂ ನಾನಲ್ಲಿ " ಎಂಬಂತೆ ತೋರುತ್ತಿಲ್ಲವೇ? ಜವರಾಯ ಎಷ್ಟು ಜನರಿಗೆ ಇಂತಹ ಅಂತ್ಯವನ್ನು ಕರುಣಿಸಬಲ್ಲ? ದೇವಸ್ಥಾನಗಳಿಗೆ ಹೋದಾಗ ತೀರ್ಥ ಪ್ರಸಾದ ಸ್ವೀಕರಿಸಿ ಅಲ್ಲಿನ ಮಂಟಪದಲ್ಲಿ ಕ್ಷಣ ಹೊತ್ತು ಕುಳಿತು " ಭಗವಂತ ನನಗೆ ಸಾತ್ವಿಕ ಬದುಕನ್ನು ಕೊಡು, ಪರಾಧೀನವಾಗದ ಸಹಜ ಹಾಗು ಅನಾಯಾಸದ ಸಾವು ಕೊಡು" ಎಂದು ಬೇಡಿಕೊಳ್ಳಬೇಕಂತೆ. ಈ ಜೋಡಿಯೂ ಹಿಂದೊಮ್ಮೆ ಆ ರೀತಿ ಬೇಡಿಕೊಂಡ ಅವರ ಆರ್ತತೆಗೆ ಮೆಚ್ಚಿ ಕೊರೊನ ರಹಿತ ಅಂತ್ಯವನ್ನು ಆ ದೇವರು ಕರುಣಿಸಿರಲು ಸಾಕು. ಈ ಸಂತೃಪ್ತ ಜೀವಿಗಳಿಗೆ ಸದ್ಗತಿ ಪಕ್ಕಾ ಆದರೂ ಮಿತ್ರನಾದ ನಾನು ದೇವರಲ್ಲಿ ಬೇಡುವುದು ನನ್ನ ಕನಿಷ್ಠ ಸೌಜನ್ಯವಲ್ಲವೇ? =000= ಸುರೇಶ ಹೆಗಡೆ , ಹುಬ್ಬಳ್ಳಿ

ಅನಾಯಾಸೇನ ಮರಣಂ ..........
bottom of page