top of page

ಅಗ್ನಿಯಲಿ ಪುಟಗೊಂಡು ಚಿನ್ನ ಹೊಳೆದೀತು..!

ಕಾಚೆ ಭಾಂಡೆ ಸೆ ರಹೆ, ಜೋ ಕುಮ್ಹಾರ ಕೊ ನೇಹ/ ಭೀತರ ಸೇ ರಕ್ಷಾ ಕರ, ಬಾಹರ ಜೋಯಿ ದೇಹ // ತಾಯಗರ್ಭದಲ್ಲಿ ಮೊಳಕೆಯೊಡೆದು ಹೊರಬಂದ ಮಗು ಮಾಂಸದ ಮುದ್ದೆಯಾಗಿರುತ್ತದೆ. ಅದಕ್ಕೆ ನೋವಾಗದ ರೀತಿಯಲ್ಲಿ ಮೂಗು, ಹಣೆ, ತಲೆ -ಯನ್ನು ಎಣ್ಣೆಯಿಂದ ತಿಕ್ಕಿ ತಿಕ್ಕಿ ಮಗುವಿನ ಆಕಾರ ಸರಿಪಡಿಸುತ್ತಾರೆ. ಅಲ್ಲದೆ ಮಗು ದೊಡ್ಡದಾದಂತೆಲ್ಲ ಅದಕ್ಕೆ ಉತ್ತಮ ಸಂಸ್ಕಾರ, ಮಾರ್ಗದರ್ಶನ ನೀಡುವ ಅಗತ್ಯತೆ ಸಹ ಇದೆ. ಇದೇ ರೀತಿ ಮನುಷ್ಯ -ನಿಗೆ ಉತ್ತಮ ಬದುಕಿನ ನಿರ್ವಹಣೆಗಾಗಿ ಸೂಕ್ತ ಮಾರ್ಗದರ್ಶನ ನೀಡುವ ಗುರುವಿನ ಅಗತ್ಯವಂತೂ ಇದ್ದೇ ಇದೆ. ಬದುಕಿಗೆ ಸರಿ ದಾರಿ ತೋರಿಸುವ ಇಂಥ ವ್ಯಕ್ತಿಗಳ ಸಹಭಾಗಿತ್ವ ಇದ್ದಾಗ ಗಮ್ಯ ತಲುಪಲು ಸುಲಭವಾಗುತ್ತದೆ. "ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು "ಎಂಬ ಮಾತಿನಂತೆ ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ತಾಯಿ, ತಂದೆ -ಯರ ಪಾತ್ರ ಅತ್ಯಂತ ಮಹತ್ವದ್ದು. ತಾಯಿ, ತಂದೆ, ಗುರು, ಹಿರಿಯರು, ಮಿತ್ರರು, ಹಿತ ಚಿಂತಕರ ಪ್ರೀತಿ, ಹರಕೆಗಳು ಮನುಷ್ಯನಿಗೆ ಬೆಂಗಾವಲಾಗಿ ಸನ್ಮಾರ್ಗದಲ್ಲಿ ಮುನ್ನಡೆಯಲು ಸಹಕಾರಿಯಾಗುತ್ತವೆ. ಯಾವ ರೀತಿ ಕುಂಬಾರ ತನ್ನ ತಿಗರಿಯ ಮೇಲೆ ಮಡಕೆಗಳನ್ನು ಮಾಡುವಾಗ, ಮಣ್ಣಿನ ಮುದ್ದೆಯನ್ನು ಹೊರಗಿನಿಂದ ಬಡಿಯು -ತ್ತಿದ್ದರೂ ಅದು ಕುಸಿದು ಬೀಳದಂತೆ ಒಳಗಿನಿಂದ ಮತ್ತೊಂದು ಕೈಯ ಆಧಾರ ಕೊಟ್ಟಿರುತ್ತಾನೆ. ಸಂತ ಕಬೀರರು..ಮಣ್ಣ ಗಡಿಗೆಯ ರೂಪಿಸುವ ಕುಂಬಾರ/ ಹೊರಗೆ ಪೆಟ್ಟು ಕೊಡುತ್ತ ಒಳಗೆ ನೀಡುವ ಆಸರ// ಎಂದು ಹೇಳುತ್ತ, ಗುರು, ಹಿರಿಯರು ಮಕ್ಕಳನ್ನು ಶಿಕ್ಷಿಸಿದರೂ ಅದು ಅವರ ಉತ್ಕರ್ಷಕ್ಕೆ ಎಂದು ಅಭಿಪ್ರಾಯ ಪಡುತ್ತಾರೆ. ಬೈದು ಬುದ್ಧಿ ಕಲಿಸುವ ಗುರು, ಹಿರಿಯರು, ಹಿತೈಷಿ -ಗಳು ಮೇಲ್ನೋಟಕ್ಕೆ ಶಿಕ್ಷೆ ವಿಧಿಸಿದರೂ ಆಂತರಿಕ -ವಾಗಿ ಅಗತ್ಯ ಆಸರೆ ನೀಡಿ ನಮ್ಮ ಭವಿಷ್ಯವನ್ನು ರೂಪಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗುರು, ಹಿರಿಯರ ಉದ್ದೇಶ, ಮಹತ್ವವನ್ನು ಅರಿತು ನಡೆಯಿರಿ ಎಂದು ಕಬೀರರು ಸಂದೇಶ ನೀಡಿದ್ದಾರೆ. ಉಳಿಯ ಪೆಟ್ಟುಂಡು ಕರಿಕಲ್ಲು ಮೂರ್ತಿಯಾಗ್ವುದು ತುಳಿತ, ಹೊಡೆತವ ತಿಂದು ಮಣ್ಣು ಹದವಾಗ್ವುದು / ಹೊಳೆಚಿನ್ನ ಅಗ್ನಿಯಲಿ ಪುಟಗೊಂಡು ಶೋಭಿಪುದು ಇಳೆಯ ಕಷ್ಟಗಳ ದೂರದಿರು - ಶ್ರೀವೆಂಕಟ // ಶ್ರೀರಂಗ ಕಟ್ಟಿ ಯಲ್ಲಾಪುರ.

ಅಗ್ನಿಯಲಿ ಪುಟಗೊಂಡು ಚಿನ್ನ ಹೊಳೆದೀತು..!
bottom of page