ಅಕ್ಷರದ ಹಣತೆ ಹಚ್ಚಿದ ಅಮ್ಮ
ಅಮ್ಮ ಸರಿ ಸುಮಾರು ಪೇಟೆಯೆಂದೇ ಕರೆಯಬಹುದಾದ ಊರಿನಲ್ಲಿ ಹುಟ್ಟಿ ಬೆಳೆದವಳು. ಆಗಿನ ಕಾಲದಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದ ಅಂಕಪಟ್ಟಿಯನ್ನು ಕೊನೆಯವರೆಗೂ ಕಬ್ಬಿಣದ ಪೆಟ್ಟಿಗೆಯಲ್ಲಿ ಭದ್ರವಾಗಿಟ್ಟುಕೊಂಡಿದ್ದಳು. ಹೈಸ್ಕೂಲು ಸೇರಿ ಓದಬೇಕೆಂಬ ಅವಳ ಕನಸು ಮೂರುದಿನ ಉಪವಾಸ ಕೂತರೂ ಈಡೇರದ ಬಗ್ಗೆ ಪದೇ ಪದೇ ಪಶ್ಚಾತ್ತಾಪ ಪಟ್ಟುಕೊಳ್ಳುತ್ತಿದ್ದಳು. ಹೆಣ್ಣುಮಕ್ಕಳ ಮದುವೆಗೆ ಪರದಾಡಬೇಕಾದ ಆ ಕಾಲದಲ್ಲಿ ಅನಕ್ಷರಸ್ಥನಾದ ಅಪ್ಪನ ಕೈಹಿಡಿದು ಅಕ್ಷರವೇ ಇಲ್ಲದ ಊರಿನಲ್ಲಿ ತನ್ನ ಜೀವಿತವನ್ನೆಲ್ಲ ಕಳೆದಳು. ಎಂಥ ಕಠಿಣ ಲೆಕ್ಕವಿರಲಿ, ವಸ್ತುಗಳ ಬೆಲೆ ನಿಗದಿಯಿರಲಿ ಕ್ಷಣಮಾತ್ರದಲ್ಲಿ ಬಾಯಲ್ಲೇ ಉತ್ತರ ಹೇಳುವ ಅವಳ ಚಾಕಚಕ್ಯತೆ ಇಡಿಯ ಊರಿಗೇ ಪ್ರಸಿದ್ಧಿಯಾಗಿತ್ತು. ಊರಲ್ಲಿ ಯಾರಿಗೆ ಯಾವುದೇ ಅಂಚೆ ಬರಲಿ ಅಮ್ಮನನ್ನು ಹುಡುಕಿಕೊಂಡು ಬರುತ್ತಿದ್ದರು. ಹೀಗಾಗಿ ಅಮ್ಮನೆಂದರೆ ನಮಗೆಲ್ಲಾ ಬಾಲ್ಯದಿಂದಲೂ ವಿಸ್ಮಯ. ಆದರೆ ಮೈಮುರಿಯುವಂತೆ ದುಡಿಮೆಯೊಂದೇ ಮುಖ್ಯವಾಗಿರುವ ಕುಟುಂಬದಲ್ಲಿ ಅವಳ ವಿದ್ಯೆಯ ಬಗ್ಗೆ ಅಂಥಹ ಪ್ರಾಮುಖ್ಯತೆಯೇನೂ ಇರಲಿಲ್ಲ. ಅವಳಿಗಿಂತ ಕಲಿಕೆಯಲ್ಲಿ ಹಿಂದಿದ್ದವರೆಲ್ಲ ಶಿಕ್ಷಕಿಯರಾಗಿ ಸಾವಿರ ಸಾವಿರ ಸಂಬಳ ಎಣಿಸುತ್ತಿರುವಾಗ ಅಮ್ಮ ಒಂದೇ ಒಂದು ಸ್ಟೀಲ್ ಪಾತ್ರೆ ಕೊಳ್ಳಲು ಅಪ್ಪನ ಕಣ್ಣುತಪ್ಪಿಸಿ ಪೈಸೆ ಪೈಸೆ ಕೂಡಿಡುತ್ತಿದ್ದಳು. ಅಂಥಹ ಅಮ್ಮ ನಮ್ಮಲ್ಲಿ ಅಕ್ಷರದ ಹಣತೆ ಹಚ್ಚಿದಳು. ಶಾಲೆಯೇ ಇಲ್ಲದ ಊರಿನಲ್ಲಿ ನಮಗೆಲ್ಲಾ ಮನೆಯಲ್ಲಿಯೇ ಶಿಕ್ಷಕಿಯಾದಳು. ಬೀಸುವ ಕಲ್ಲಿನಲ್ಲಿ ಸೇರು ಸೇರು ಅಕ್ಕಿ ಕಡೆಯುವಾಗ, ತೋಟದಲ್ಲಿ ದನಗಳಿಗೆ ಹುಲ್ಲು ಕೀಳುವಾಗ ನಮ್ಮನ್ನೂ ಜೊತೆಗೆ ಕರೆದೊಯ್ದು ಅಕ್ಷರಗಳನ್ನು, ಮಗ್ಗಿಯನ್ನು, ಲೆಕ್ಕಗಳನ್ನೂ ಮಾಡಿಸುತ್ತಿದ್ದಳು. ದಿನವೂ ಕಥೆಗಳನ್ನು ಹೇಳುವುದಲ್ಲದೇ ತವರಿಗೆ ಹೋದಾಗ ಅಲ್ಲಿ ಓದಿಬಿಟ್ಟ ಪತ್ರಿಕೆಗಳನ್ನು ತಂದು ಓದುವ ಹುಚ್ಚು ಹಿಡಿಸಿದಳು. ಏನು ಬೇಕಾದ್ರೂ ಆಗಲಿ, ಕಲಿಯುವುದನ್ನು ಮಾತ್ರ ಬಿಡಬೇಡಿ ಎಂದು ಸಮಯ ಬಂದಾಗಲೆಲ್ಲ ಹೇಳುತ್ತಿದ್ದಳು. ಓದುವುದರಲ್ಲಿ ನಾವೆಲ್ಲ ಮುಂದಿರುವುದನ್ನು ಕಂಡು ಖುಶಿಪಡುತ್ತಿದ್ದಳು. ‘ಸಣ್ಣದಾದರೂ ನೌಕರಿ ಬೇಕು ಮಗಾ, ಆಗ ಮಾತ್ರ ಹೆಣ್ಣುಮಕ್ಕಳಿಗೆ ಬೆಲೆ’ಎಂದು ಎಚ್ಚರಿಸುತ್ತಿದ್ದಳು. ಇಷ್ಟೇ ಅಲ್ಲ, ಅಮ್ಮನೆಂದರೆ ನನಗಂತೂ ಅಚ್ಚರಿಗಳ ಸರಮಾಲೆ. ಎಂದೂ ದೇವರು, ದಿಂಡಿರು ಎಂದು ಹರಕೆ ಹೊರದ ಅಮ್ಮ ಮಠಮಾನ್ಯಗಳಿಂದ ಗಾವುದ ದೂರ. ‘ದೇವರು ಇನ್ನೆಲ್ಲಿರುತ್ತಾನೆ? ನಮ್ಮ ನಮ್ಮ ಆತ್ಮದಲ್ಲಿರುತ್ತಾನೆ. ಇನ್ನೊಬ್ಬರ ಆತ್ಮ ನೋಯಿಸಬೇಡ. ದೇವರು ಮೆಚ್ಚುವುದಿಲ್ಲ’ ಎನ್ನುತ್ತಿದ್ದ ಅಮ್ಮನ ಮಾತು ವಚನದಂತೆ ಕಂಡರೂ ವಚನಸಾಹಿತ್ಯ ಓದಿ ಬಂದುದಾಗಿರಲಿಲ್ಲ. ಹತ್ತಿರ ಬಂದವರನ್ನೆಲ್ಲ ಅಗಾಧವಾಗಿ ಪ್ರೀತಿಸುತ್ತಿದ್ದ ಅಮ್ಮ ಅವರ ಬಳಿ ಹಸಿವೆಯೆಂದೂ ಸುಳಿಯದಂತೆ ಕಾಯುತ್ತಿದ್ದಳು. ಕಾಲಿಗೊಂದು ಚಪ್ಪಲಿಯನ್ನೂ ಕೊನೆಯವರೆಗು ಕೊಳ್ಳಲಾಗದಷ್ಟು ಬಡತನದಲ್ಲಿಯೇ ಬಾಳಿದ ಅಮ್ಮನಿಗೆ ಇನ್ನೊಬ್ಬರ ಹಸಿವೆಯನ್ನು ನೀಗಿಸುವುದೇನೂ ಸುಲಭದ ಕಾಯಕವಾಗಿರಲಿಲ್ಲ. ಅವಳ ಈ ಸಣ್ಣ ಸಣ್ಣ ವೈಚಾರಿಕತೆಗಳು ನನ್ನನ್ನು ಸದಾ ಕಾಯುತ್ತಲೇ ಬಂದಿವೆ. ಮನೆಗೆ ಬಂದ ಸಣ್ಣಪುಟ್ಟ ಹುಳಗಳನ್ನೂ ಕೊಲ್ಲದೇ ಹಿಡಿಸೂಡಿಯಲ್ಲಿ ಹಿಡಿದು ಹೊರಗೆ ಬಿಡುತ್ತಿದ್ದ ಅಮ್ಮನ ಕರುಣೆಗೆ ಕೊನೆಯಿದೆಯೆ? ಅವಳ ಆಸೆಯಂತೆ ನಾವೆಲ್ಲರೂ ಅಕ್ಷರದ ಅರಿವನ್ನು ಮೈಗೂಡಿಸಿಕೊಂಡು ಬದುಕಿನ ದಾರಿಯನ್ನು ಭದ್ರವಾಗಿಸಿಕೊಳ್ಳುವ ಹಂತದಲ್ಲಿಯೇ ಅಮ್ಮ ವಿದಾಯ ಹೇಳಿ ಹೋಗಿಬಿಟ್ಟಳು. ಬದುಕಿನ ಒಂದೊಂದು ಸೌಲಭ್ಯಗಳನ್ನು ನಮ್ಮದಾಗಿಸಿಕೊಳ್ಳುವಾಗಲೆಲ್ಲ ಅವಳ ನೆನಪಲ್ಲಿ ಕಣ್ಣಂಚು ಒದ್ದೆಯಾಗುತ್ತದೆ. -ಸುಧಾ ಆಡುಕಳ ಸುಧಾ ಆಡುಕಳ ಇವರು ಮೂಲತಃ ಉತ್ತರಕನ್ನಡದ ಹೊನ್ನಾವರ ತಾಲೂಕಿನ ಆಡುಕಳ ಗ್ರಾಮದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ರವೀಂದ್ರ, ಹದಿಹರೆಯದ ಕನಸುಗಳೊಂದಿಗೆ, ಮಗುವಿನ ಭಾಷೆ ಮತ್ತು ಶಿಕ್ಷಕ, ಬಕುಲದ ಬಾಗಿಲಿನಿಂದ ಮುಂತಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳ ರಾಮಾಯಣ, ಕನಕ-ಕೃಷ್ಣ, ಚಿತ್ರಾ, ರಾಧಾ, ನೃತ್ಯಗಾಥಾ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಇವರ ಕಥೆ ಮತ್ತು ಕವನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ತಾಯಿಯ ಕುರಿತಾದ ಅವರ ಈ ಬರೆಹ ನಮ್ಮ ಮನಸ್ಸನ್ನು ಆಳವಾಗಿ ತಟ್ಟುತ್ತದೆ. -ಸಂಪಾದಕ