"ಅಂಕೋಲೆಯ ಶೆಟ್ಟರ ಚಹಾದಂಗಡಿಗಳು "
ಆಗಿನ ದಿನಗಳೇ ಹಾಗೆ..... ಅಂಕೋಲೆಯ ಪೇಟೆಗೆ ಬಂದವರಿಗೆ ಒಂದಿಲ್ಲೊಂದು , ""ಶೆಟ್ಟರ"" ಚಹಾ ಅಂಗಡಿಗಳ ಬಾಗಿಲುಗಳು ಸದಾ ಸ್ವಾಗತಿಸುತ್ತಿದ್ದವು. ಈ ಅಂಗಡಿಗಳ ಚಹಾ, ಕಷಾಯ, ವಡಾ,ಪುರಿ,ಮಿಸಳ್,ಲಾಡು, ವಟಾಣೆ, ಉಸುಳಿ ವಗೈರೆ ತಿಂಡಿಯ ಸವಿಯೊಡನೆ, ಆ ಹೊಗೆಯಿಂದ ಕೂಡಿದ ವಾತಾವರಣದಲ್ಲಿ ಬೆಂಚುಗಳಮೇಲೆ ಕುಳಿತು ಬತ್ತಿ ಸೇದುತ್ತ "ಸೊರೊಕ್" ಎಂದು ಶಬ್ದ ಮಾಡುತ್ತ ಹೀರುವ ಕಾಜಿನ ಗ್ಲಾಸಿನ ಚಹಾದ ಮಜಾವೇ " ಬೇರೆಯಾಗಿತ್ತು. ಚಿಕ್ಕದಾಗಿ ಕಾಣುತ್ತಿದ್ದ ನಮ್ಮೂರಲ್ಲಿ, ಜನಸಂಖ್ಯೆಯೂ ಕಡಿಮೆ ಇರುವ ಆ ದಿನಗಳಲ್ಲಿ, ಎಲ್ಲ ಮುಖಗಳು.. ಎಲ್ಲರಿಗೂ ಪರಸ್ಪರ ಪರಿಚಿತವಾಗಿರುವ ದಿನಗಳು ಅವು. ಹೆಸರಿಗಿಂತ ಮನೆತನ ಇಲ್ಲವೇ ಪಾಲಕರ ಹೆಸರಿನಿಂದ ವ್ಯಕ್ತಿಯನ್ನು, ಅಂಗಡಿಯವರನ್ನು ಗುರುತಿಸಿ ಕರೆಯುವ ಆತ್ಮೀಯ ದಿನಗಳು ಅವು. ಬಹುಷಃ ಬಹುಕಡಿಮೆ ಹೊಟ್ಟೆಕಿಚ್ಚಿನ ಜನರಿರುವ, ಹಣಕಡಿಮೆ ಇದ್ದರೂ ತಾಳ್ಮೆಯ, ಹೊಂದಾಣಿಕೆಯ ದಿನಗಳವು. ಆ ಚಹಾದಂಗಡಿಗಳಲ್ಲಿ ಅಂದಿನ ಪೇಪರಿನಲ್ಲಿ ಬರುವ, ರೇಡಿಯೋಗಳಲ್ಲಿ ಬಿತ್ತರಿಸುವ ವಿಷಯಗಳಿಗಿಂತ ಹೆಚ್ಚಿನ ಸುದ್ದಿಗಳು,ಅಲ್ಲಿ ನಡೆಯುವ ಚರ್ಚೆಯಿಂದ ಗಿರಾಕಿಗಳಿಗೆ ಪುಕ್ಕಟೆಯಾಗಿ ಮನೋರಂಜನೆ ಮತ್ತು ಮಾಹಿತಿ ಸಿಗುತಿತ್ತು. ಕೆಲರಿಗಂತೂ ಅಲ್ಲಿ ದೊಡ್ಡದಾಗಿ ಹಚ್ಚುವ ರೇಡಿಯೋದಿಂದ ಬರುವ ಹಾಡುಗಳನ್ನು, ಬಿತ್ತರಿಸುವ ಸುದ್ದಿಗಳನ್ನು ಕೇಳುವ ತವಕ. ಸುದ್ದಿಮುಗಿದಂತೆ, ಹಿರಿಯರು ಮಾಡುವ ತಮ್ಮದೇ ವ್ಯಾಖ್ಯಾನದ ಕತೆಗಳು ಹೊರಬಂದು ಮನೋರಂಜನೆ ನೀಡುತ್ತಿದ್ದವು. ಊರಿನಲ್ಲಿ ಯಾವುದೇ ಹುಟ್ಟು ಇಲ್ಲವೇ ಸಾವು ಸಂಭಾವಿಸಿದರೂ ಅದು ಮೊದಲು ಚರ್ಚೆಗೆ ಬರುವದು ಇದೇ ಅಂಗಡಿಗಳಲ್ಲಿ. ಆ ಕಾಲದಲ್ಲಿ ಅಂಕೋಲಾ ಪೇಟೆಯು "ಕೆಳಗಿನ ಬಜಾರ", "ಮೇಲಿನ ಬಜಾರ", "ಹಳೆಯ ಬಜಾರ" ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಗತವೈಭವದ ಪಳಿಯುಳಿಕೆಯಂತಿದ್ದ ಹಳೆ ಬಜಾರವು ಸಂಪೂರ್ಣ ಖಾಲಿ ಇದ್ದು, ಸಂಜೆ ಆಗುತ್ತಿದ್ದಂತೆ ಯಾರೂ ಆಕಡೆ ಸುಳಿಯುತ್ತಿರಲಿಲ್ಲ. (ಕೆಲವು ಮನೆಗಳನ್ನು ಹೊರತುಪಡಿಸಿ ). ಕೆಳಗಿನ ಬಜಾರ್ ಅಂದರೆ ಈಗಿನ ಬಂಡೀಬಜಾರ್ ಆಗಿತ್ತು. ಸಮರ್ಥ್ ಥೇಟರ್ ಕಡೆ ಹೋಗುವ ಭಾಗ ಮೇಲಿನಬಜಾರ್ ಆಗಿತ್ತು. ಅಂಕೋಲೆಯ ಕನ್ನಡ ವೈಶ್ಯ ಸಮಾಜದ "ಶೆಟ್ಟರು", ಸಜ್ಜನರಾಗಿ ತಮ್ಮ ಸದ್ಗುಣದಿಂದ ಅಂಕೋಲೆಯ ವ್ಯಾಪಾರೋದ್ಯಮದಲ್ಲಿ ಕಿರೀಟಪ್ರಾಯರಾಗಿದ್ದರು. ಅಂತಹ ಶೆಟ್ಟರು ಅಂಕೋಲೆಯ ಪ್ರಮುಖ ವ್ಯಾಪಾರಿಗಳು ಹಾಗೂ ಪರಮ ದೈವಭಕ್ತರು. ಅವರು ಅಡುಗೆ,ತಿಂಡಿ ವಗೈರೆ ಮಾಡುವುದರಲ್ಲಿ ಎತ್ತಿದ ಕೈ. ಹೀಗೆ ನಮ್ಮೂರ ಶೆಟ್ಟರು ಮಾಲ್ಕರಿಗಳು, ಅಡಿಗೆ ಮಾಡುವವರು, ಚಹಾ ದುಕಾನು ನಡೆಸುವವರು, ಕಿರಾಣಿ ವ್ಯಾಪಾರಿಗಳು.. ಆಗಿದ್ದರು. ಭೀಕ್ಕಯ್ಯ ಶೆಟ್ಟಿ, ವಿಠಲ್ ಶೆಟ್ಟಿ, ದುರ್ಗಾ ಶೆಟ್ಟಿ, ಮಹದೇವ್ ಶೆಟ್ಟಿ....ಇವರಿಗೆ ಮದುವೆ, ಮುಂಜಿ ಸಮಾರಂಭದಲ್ಲಿ ಭಾರಿ ಬೇಡಿಕೆ ಇತ್ತು. ಕಿರಾಣಿ ವ್ಯಾಪಾರ ಬಿಟ್ಟರೆ, ಹೋಟೆಲ್ ಅಂದರೆ ಚಹಾ ದುಕಾನ್ ವ್ಯಾಪಾರವು ಅವರ ದೊಡ್ಡ ಆಸ್ತಿಯಾಗಿತ್ತು. ಶುಭ್ರ ಬಿಳಿ ಧೋತಿ ಇಲ್ಲವೇ ಪೈಜಾಮ, ಬಿಳಿ ಶರ್ಟ್ ಹಾಗೂ ಶೋಭೆತರುವ ಗಾಂಧಿ ಟೋಪಿ ಇವು ನಮ್ಮೂರ ಶೆಟ್ಟರ ಟ್ರೇಡಮಾರ್ಕ್ ಆಗಿದ್ದವು. ಕೆಳಗಿನ ಬಜಾರನಲ್ಲಿ ಗಂಗಾವಳಿ ರಸ್ತೆಯಲ್ಲಿ " "ಗಣಪತಿ ಶೆಟ್ಟರ ಅಂಗಡಿ", ಅದರ ಎದುರಿನಲ್ಲಿ "ರಾಮನಾಥ್" ಶೆಟ್ಟರ ಅಂಗಡಿ", ಪ್ರಮಾಣ ಕಟ್ಟೆಗೆ ಹೊಂದಿ ಕೇಣಿ ರಸ್ತೆಯಕಡೆಗೆ ಕುಯ್ಡ್ ವಿಠಲ್ ಶೆಟ್ಟರ ಅಂಗಡಿ", "ಉತ್ತಮ ಶೆಟ್ಟಿ ಅಂಗಡಿ",ಇವು ಗಂಗಾವಳಿಕಡೆಯ ವ ಭಾವಿಕೇರಿಕಡೆಯ ಹಳ್ಳಿಗಳಿಂದ ಪೇಟೆಗೆ ಬರುವ ಜನರು ಹೋಗುವ ಖಾಯಂ ಅಂಗಡಿಗಳಾದರೆ, ಶಾಂತಾದುರ್ಗಾ ದೇವಸ್ಥಾನದ ನೇರದಲ್ಲಿ "ಸುಬ್ರಾಯ ಶೆಟ್ಟರ ಅಂಗಡಿ",(ವಾಡಿಕೆಯಲ್ಲಿ ಕರಿಸುಬ್ರಾಯ್ ಶೆಟ್ಟಿ ),ಪೂರ್ವ ದಿಕ್ಕಿಗೆ ಮೇಲಿನ ಬಾಜಾರ್ಕಡೆ ಸಾಗಿದಂತೆ "ಬೈಕೋಟ್ ಶೆಟ್ಟಿ ಹೋಟೆಲ್ ", "ಮಾಳಪ್ಪ ಶೆಟ್ಟರ ಹೋಟೆಲ್ ", ಶಿವ ಶೆಟ್ಟಿಯ "ಶಿವಾನಂದ ಭವನ", ..ಮುಂದೆಸಾಗಿದಂತೆ "ರಾಮಶೆಟ್ಟಿ ಹೋಟೆಲ್ ",ಅಲ್ಲಿಯೇ ಪಕ್ಕದಲ್ಲಿ ನಾಗಪ್ಪ ಶೆಟ್ಟಿ ಹೋಟೆಲ್,ಆನಂತರದ ದಿನಗಳಲ್ಲಿ ಹೋಟೆಲ್ ವ್ಯವಹಾರದಲ್ಲಿ ನೂತನ ಕ್ರಾಂತಿ ಮಾಡಿದ ಓನಮ ಶೆಟ್ಟರ ಜೈಹಿಂದ್ ಹೈಸ್ಕೂಲ್ ಪಕ್ಕದ "ಜೈಹಿಂದ್ ಹೋಟೆಲ್ ", ಪಿ.ಎಂ ಶಾಲೆಯ ಹತ್ತಿರದ ಬೀರಪ್ಪ ಶೆಟ್ಟಿಯ ವಿದ್ಯಾರ್ಥಿಗಳ ಹೋಟೆಲ್, ಅಜ್ಜಿಕಟ್ಟಾ ಸದಾಶಿವ ಶೆಟ್ಟಿ, ಅಂಬರಕೊಡ್ಲದ ಮಾಳಿ ಶಂಕರ ಶೆಟ್ಟಿ, ಕಾಲೇಜ್ ಕ್ಯಾಂಟೀನ್ ಗೋಪು..... ಹೀಗೆ ಮೇಲಿನಿಂದ ಕೆಳಗಿನವರೆಗೂ,ಊರಿನ ಆರಂಭದಿಂದ ಕೊನೆಯವರೆಗೂ ಹರಡಿದ್ದ ಶೆಟ್ಟರ ಹೋಟೆಲುಗಳ ಜಾಲಗಳ ಮದ್ಯೆ ಕೆಲವು ತಮ್ಮದೇ ವಿಶಿಷ್ಟ ರುಚಿ ಹಾಗೂ ಗಿರಾಕಿ ಹೊಂದಿದ ಕಾಮತರ ವೆಲ್ಕಮ್ ಹೋಟೆಲ್, ನಾನ್ಯಾ ಹೋಟೆಲ್, ವಾಮನ ಮಹಾಲೆ ಹೋಟೆಲ್,ಪಕ್ಕದಲ್ಲಿ ರಾಮಾ ಅಂಕೋಲೆಕರ್ ಹೋಟೆಲ್,ವಿಷ್ಣು ಭಟ್ಟರ ಸುದರ್ಶನ್ ಕೆಫೆ ವಗೈರೆ ಹಾಗೂ ಪರಊರಿನ ಯಾತ್ರಿಕರಿಗೆ ಮತ್ತು ನೌಕರಿ ವರ್ಗದವರಿಗಾಗಿ , ಜನರಿಗೆ ಊಟ ಬಡಿಸುತ್ತಿದ್ದ ಹೆಗಡೆ ಖಾನಾವಳಿ, ಸಿನ್ ಪ್ರಭು ಖಾನಾವಳಿ.. ಇವೂ ಸಹ ತಮ್ಮ ತಮ್ಮ ಖಾದ್ಯಗಳಿಂದ, ಸ್ವಾದಗಳಿಂದ ಆಕರ್ಷಿಸುತ್ತಿದ್ದವು. ಪ್ರತಿ ಹೋಟೆಲಿನ ಬಾಗಿಲಿನಲ್ಲಿ ದೊಡ್ಡದಾದ ಕಾಜಿನ ಕಪಾಟು ಹಾಗೂ ಅದರಲ್ಲಿ ನೀಟಾಗಿ ಆಕರ್ಷಿಸಲು ಜೋಡಿಸಿದ್ದ ವಿವಿಧ ಖಾದ್ಯಗಳು ಎಂಥವರಿಗೂ ಬಾಯಲ್ಲಿ ನೀರೂರಿಸುತ್ತಿದ್ದವು.(ಕಂತ್ರಿಯ ಬೈಕೋಟ್ ಶೆಟ್ಟೆಯವರ ಅಂಗಡಿಯೂ ಆಡುಕಟ್ಟೆ ಹತ್ತಿರ ಇದ್ದು, ಅವರು ಕೆಳವರ್ಗದ ಜನರೆಂದು ವರ್ಗಿಕರಿಸಿ ತೆಂಗಿನ ಗರಟೆಯಲ್ಲಿ ಚಹಾ ಕೊಡುತ್ತಿದ್ದರಿಂದ ನಂತರದ ದಿನಗಳಲ್ಲಿ ಹರಿ ಪೈಯವರ ನೇತೃತ್ವದಲ್ಲಿ ಜನರ ಭಹಿಷ್ಕರಕ್ಕೆ ವೊಳಗಾಗಿ "Boycott "ಆಗಿದ್ದೂ ಒಂದು ಇತಿಹಾಸ ). ಆಗಿನ ದಿನಗಳಲ್ಲಿ "ಮಿಸಳ್ ", "ಬಟಾಟೆ ವಡೆ", "ಕಾಂದಾ ಭಜಿ ","ಇಡ್ಲಿ ", ಇತ್ಯಾದಿಗಳು ವಿಶೇಷ ಸವಿಯುವ ತಿಂಡಿಯಾಗಿದ್ದವು. ಅವುಗಳೊಂದಿಗೆ ಶೇವ್, ಚಿವಡ,ಶಂಕರಪಾಳಿ, ಲಾಡು, ಮಕ್ಕಳಬೀಜ, ಖಾಜಮಾಜೆ ಇತ್ಯಾದಿಯ ಸವಿರುಚಿಯೇ ಬೇರೆ. ಸಕ್ಕರೆರೋಗದ ಹೆಸರನ್ನೇ ಕೇಳದ ಮತ್ತು ಚಿಂತೆಯಿಲ್ಲದೆ ಲೆಕ್ಕವಿಲ್ಲದೇ ಸವಿಯುವ ಚಹಾ, ಕಷಾಯದ ಗಿರಾಕಿಗಳಿಗೆ ಎಲ್ಲಾ ಅಂಗಡಿಯ ಬಾಗಿಲುಗಳು ತೆರೆದಿದ್ದು ನಗುಮುಖದಿಂದ ಸ್ವಾಗತಿಸುತ್ತಿದ್ದವು. ಮುಂಜಾವಿನಲ್ಲಿ ಹೊತ್ತಿಸಿದ ವೊಲೆಯ ಬೆಂಕಿ ಆರುವದು ರಾತ್ರಿಯಲ್ಲೇ ಇತ್ತು. ಕೆಲಅಂಗಡಿಗಳಲ್ಲಿ ಬೆಳಿಗ್ಗೆ ಚಹಾ ಪಾತ್ರೆಯಲ್ಲಿ ನೀರುಹಾಕಿ ಕುದಿಯಲು ಇಟ್ಟಲ್ಲಿ ಅದೇ ಪಾತ್ರೆಯಲ್ಲಿ ಆಗಾಗ ಚಹಾಪುಡಿ ಸೇರಿಸುವುದನ್ನು ಬಿಟ್ಟರೆ, ಹಳೆ ಚಹಾ ಸೊಪ್ಪು ತೆಗೆದೊಗಿಯುವ ಪದ್ದತಿಯೇ ಇರಲಿಲ್ಲ. ಆದರೆ ಅಂತಹ ವಿಶೇಷ ವ್ಯಕ್ತಿಗಳು ಬಂದಾಗಮಾತ್ರ, ಹಳೆಯ ಸೊಪ್ಪಿನ ಬದಲಾವಣೆ ಆಗುತಿತ್ತು. ಸುಬ್ರಾಯ ಶೆಟ್ಟರ " ಬಟಾಟೆ ವಡೆ " ಹಾಗೂ ಅದರೊಂದಿಗೆ ನೀಡುತ್ತಿದ್ದ ಚಟ್ನಿಯ ರುಚಿ, ಶ್ರೀಕಾಂತ್ ಶೆಟ್ಟಿಯ ಸಮೋಸಾ ಭಾಜಿಯ ರುಚಿ ಅದು ತಿಂದವರಿಗೇ ಗೊತ್ತು. ಹೀಗೆ ಒಂದೊಂದು ಅಂಗಡಿಗಳು ತಮ್ಮದೇ ರುಚಿಯ ಖಾದ್ಯಕ್ಕೆ ಹೆಸರುವಾಸಿಯಾಗಿದ್ದವು. ಮುಂಬೈಯಿಂದ ರಜೆಯಲ್ಲಿ ಬಂದ ಊರಜನ, ಒಂದುದಿನ ಮೊದಲೇ ಬಂದು ಸುಬ್ರಾಯ ಶೆಟ್ಟರಲ್ಲಿ ಬಟಾಟೆ ವಡಾ ಬುಕ್ ಮಾಡುತ್ತಿದ್ದರು. ಹೀಗೆ ಹೆಚ್ಚು ಕಮ್ಮಿ ಪಟ್ಟಣವಲ್ಲದೇ,ಅಂಕೋಲೆಯ ಎಲ್ಲಾ ಹಳ್ಳಿಗಳಲ್ಲೂ ಶೆಟ್ಟರ ಚಹಾದಂಗಡಿಗಳು ತಮ್ಮದೇ ಛಾಪಿನಿಂದ, ವಿನಾಯತೆಯ ಲೇಪಿನಿಂದ ಹೆಸರುಗಳಿಸಿದ್ದವು. ಆದರೆ ನೂತನ ಆಕರ್ಷಣೆಯ ಅಂದರೆ ಮಾಂಸ, ಮದ್ಯದ ರುಚಿಹೆಚ್ಚಿದಂತೆ, ( ಅಂತೆಯೇ ಅಂಕೋಲೆಯಲ್ಲಿ ಪ್ರಥಮವಾಗಿ ಬಿಯರ್ ಬಾರ್ ಆರಂಭಿಸಿದ್ದು ಸುದರ್ಶನ ಕೆಫೆಯ ವಿಷ್ಣು ಭಟ್ಟರು )ಯುವಪೀಳಿಗೆಯ ಆಸಕ್ತಿ ಕಡಿಮೆ ಆದಂತೆ ಈ ಚಹಾದ ಅಂಗಡಿಗಳೂ ಒಂದೊಂದಾಗಿ ಮುಚ್ಚಲ್ಪಟ್ಟವು. ಹೊಸ ತಲೆಮಾರಿನ ಯುವಕರು ಬೇರೆ ಬೇರೆ ಉದ್ಯೋಗದಕಡೆ ಆಕರ್ಷಿತರಾಗಿ ಕೌಟಂಬಿಕ ಹೋಟೆಲ್ ವ್ಯಾಪಾರಕ್ಕೆ ತಿಲಾಂಜಲಿ ನೀಡಿದ್ದು ಈ ಉದ್ಯಮದ ಅವನತಿಗೆ ಕಾರಣವಾಗಿದ್ದು ದುರಂತ. ಹೀಗೆ ಆಯಾ ಹೋಟೆಲಿನಲ್ಲಿ ತಿಂದ ರುಚಿ ನೆನಪಿನಾಳಕ್ಕೆ ಇತಿಹಾಸವಾಗಿ ಸ್ಥಾಯಿಯಾಯಿತು. ಆದರೆ , ಇಂದಿಗೂ ಶೆಟ್ಟರ ಅಂಗಡಿ ವ್ಯಾಪಾರದ ಅಂದಿನ ಭರಾಟೆ, ಆ ಕಾಲದ ವೈಭವದ ದಿನಗಳು, ಅಂಗಡಿಗೆ ಹಳ್ಳಿಯಿಂದ ಕಟ್ಟಿಗೆ ಹೊರೆ ಹೊತ್ತು ತಂದು ಚೌಕಶಿಯಿಂದ ಇಳಿಸುವ ಹಾಲಕ್ಕಿ ಗೌಡತಿಯರು, ಅವರು ಸೌದಿಹೋರೆಯನ್ನು ಹಿಂದೆಮುಂದೆ ನೋಡದೇ ತಿರುಗಿಸಿ ಇಳಿಸುವಾಗ ಸೈಕಲ್ ನಡೆಸುವ ಅಮಾಯಕರು ಡಿಕ್ಕಿಯಾಗಿ ಬಿದ್ದುದು,.....ಆ ಅಂಗಡಿಗಳ ದೃಶ್ಯಗಳು ಕಣ್ಣಮುಂದೆ ಬಂದಾಗ, ಅವರ ಅಂದರೆ ""ಶೆಟ್ಟರ ""ಸೌಜನ್ಯಪೂರ್ಣ ವ್ಯಕ್ತಿತ್ವ, ಅವರ ಅಲ್ಪ ತೃಪ್ತಿಯಿಂದ ನಡೆಯುವ ಸಮಾಧಾನದ ವ್ಯಾಪಾರಿಗುಣ ನೆನಪಿನ ಪರದೆಯಿಂದ ಒಂದೊಂದಾಗಿ ಹೊರಬಂದು ಅಂಕೋಲೆಯ ಗತಕಾಲವನ್ನು ನೆನಪಿಸಿ, ಅಂಕೋಲೆಯ ಸದ್ಗುಣಿ ವ್ಯಾಪಾರಿಗಳ ಇತಿಹಾಸ ನೆನಪಿಸುತ್ತವೆ. ( ಕೆಲವು ಅಂಗಡಿಯ ಹೆಸರುಗಳು ತಪ್ಪಿದ್ದಲ್ಲಿ ಕ್ಷಮಿಸಿ). ಸುದೈವದಿಂದ, ಮಿತ್ರ ಅರವಿಂದ ಶೆಟ್ಟಿಯಿಂದ ಸಿಕ್ಕ ಬಂಡಿಬಜಾರದಲ್ಲಿ ಇದ್ದ ಅವರ ತಂದೆ ಶಿವ ಶೆಟ್ಟಿಯ "ಶ್ರೀ ಶಿವಾನಂದ ಭವನ " ಅಂಗಡಿಯ ಫೋಟೋ ಪ್ರಸ್ತುತ ಪಡಿಸುತ್ತೇನೆ. ಸುಭಾಷ್ ನಾರ್ವೆಕರ್, ವಕೀಲರು, ಅಂಕೋಲಾ